ಕಲಬುರಗಿ: ರಾಜ್ಯದಲ್ಲಿ ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನದ ಭಾಗವಾಗಿ ಕಲಬುರಗಿ ಜಿಲ್ಲೆಯ ಆಳಂದ ಸೇರಿದಂತೆ 24 ತಾಲೂಕುಗಳಲ್ಲಿ ‘ಗ್ರೌಂಡ್ ಟ್ರೂಥಿಂಗ್’ (ಕ್ಷೇತ್ರ ಪರಿಶೀಲನೆ) ನಡೆಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಸೂಚಿಸಿದೆ.
ಸೆ.4ರಂದು ಹೊರಡಿಸಿರುವ ಅಧಿಸೂಚನೆಯಂತೆ, ಜೂನ್ 1ರಿಂದ ಸೆಪ್ಟೆಂಬರ್ 2ರವರೆಗಿನ ಅವಧಿಯ ಸಮಗ್ರ ಬರ ಮೌಲ್ಯಮಾಪನದ ಆಧಾರದ ಮೇಲೆ ರಾಜ್ಯದ 24 ತಾಲೂಕುಗಳು ಗ್ರೌಂಡ್ ಟ್ರೂಥಿಂಗ್ಗೆ ಅರ್ಹವಾಗಿವೆ. ಈ ಪೈಕಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕು ‘ತೀವ್ರ ಬರ’ (Severe) ವರ್ಗಕ್ಕೆ ಸೇರಿದ್ದರೆ, ಅಫಜಲಪುರ, ಚಿತ್ತಾಪುರ, ಕಲಬುರಗಿ ಹಾಗೂ ಯಡ್ರಾಮಿ ತಾಲೂಕುಗಳು ‘ಮಧ್ಯಮ ಬರ’ (Moderate) ವರ್ಗದಲ್ಲಿವೆ. ಶಹಾಬಾದ ತಾಲೂಕು ತೀವ್ರ ಬರ ವರ್ಗದಲ್ಲಿದೆ.
ಈ ಹಿಂದೆ 102 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಸಲಾಗಿದ್ದು, ಸಮಗ್ರ ಮೌಲ್ಯಮಾಪನದ ಬಳಿಕ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಉಳಿದ ತಾಲೂಕುಗಳ ಪೈಕಿ 24 ತಾಲೂಕುಗಳು ಹಂತ-3ರ ಗ್ರೌಂಡ್ ಟ್ರೂಥಿಂಗ್ಗೆ ಅರ್ಹವಾಗಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸೆ.8ರಿಂದ 10ರವರೆಗೆ ಕ್ಷೇತ್ರ ಪರಿಶೀಲನೆ
ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆಯಡಿ ಸೆ.4ರಂದು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸೆ.5ರಿಂದ 7ರವರೆಗೆ ಬೆಳೆಗಳ ಆಯ್ಕೆ, ಪರಿಶೀಲನಾ ತಂಡಗಳ ರಚನೆ ಹಾಗೂ ಗ್ರಾಮಗಳ ರ್ಯಾಂಡಮೈಸೇಷನ್ ನಡೆಯಲಿದೆ. ಸೆ.8ರಿಂದ 10ರವರೆಗೆ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಸೆ.11ರಂದು ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಳಿಸಿ, ಬರದಿಂದ ಕೃಷಿ ಬೆಳೆಗಳಿಗೆ ಉಂಟಾದ ಹಾನಿಯ ಕುರಿತು ಫಾರಂ-11 ಸಲ್ಲಿಸುವಂತೆ ಸೂಚಿಸಲಾಗಿದೆ.
ಪರಿಶೀಲನೆಗೆ DPAR (ಇ-ಆಡಳಿತ) ಅಭಿವೃದ್ಧಿಪಡಿಸಿರುವ ‘Crop Loss GT’ ಮೊಬೈಲ್ ಆ್ಯಪ್ ಬಳಸಲಾಗುತ್ತದೆ. ಬೆಳೆ ವಿವರ, ಬೆಳೆ ಹಾನಿಯ ಪ್ರಮಾಣ, ಸ್ಥಳದ ಜಿಯೋ-ಟ್ಯಾಗ್ ಛಾಯಾಚಿತ್ರಗಳು, GPS ಸ್ಥಳಾಂಕಗಳು, ಭೂ ವಿವರ ಹಾಗೂ ಮಾಲೀಕತ್ವದ ಮಾಹಿತಿಯನ್ನು ದಾಖಲಿಸುವ ಮೂಲಕ ಪರಿಶೀಲನೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆ ಕಾಯ್ದುಕೊಳ್ಳಲು ಕ್ರಮವಹಿಸಲಾಗಿದೆ.
33%ಕ್ಕೂ ಹೆಚ್ಚು ಬೆಳೆ ನಷ್ಟವಾದರೆ ಬರ ಘೋಷಣೆಗೆ ಅರ್ಹತೆ
ಕ್ಷೇತ್ರ ಪರಿಶೀಲನೆಯಲ್ಲಿ ಅಂದಾಜು 33 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಬೆಳೆ ನಷ್ಟ ಕಂಡುಬಂದ ತಾಲೂಕು ಬರಪೀಡಿತ ಎಂದು ಘೋಷಿಸಲು ಅರ್ಹವಾಗಲಿದೆ. ಬೆಳೆ ನಷ್ಟವು 50 ಪ್ರತಿಶತ ಮೀರಿದರೆ ತೀವ್ರ ಬರ ಎಂದು ವರ್ಗೀಕರಿಸಬಹುದಾಗಿದೆ. ಅಲ್ಲದೆ, ಶೇ.50ಕ್ಕಿಂತ ಹೆಚ್ಚಿನ ಬೆಳೆ ನಷ್ಟದ ವೀಕ್ಷಣೆಗಳು ಶೇ.80 ಅಥವಾ ಅದಕ್ಕಿಂತ ಹೆಚ್ಚಾದರೆ ಮಧ್ಯಮ ಬರವನ್ನು ತೀವ್ರ ಬರವಾಗಿ ಮೇಲ್ದರ್ಜೆಗೇರಿಸುವ ಅಧಿಕಾರ ಸರ್ಕಾರಕ್ಕಿದೆ.
ಬರ ಮೌಲ್ಯಮಾಪನ ನಿರಂತರ ಪ್ರಕ್ರಿಯೆಯಾಗಿದ್ದು, ಖಾರಿಫ್-2026 ಹಂಗಾಮು ಮುಗಿಯುವವರೆಗೂ KSDNMC ವಾರಕ್ಕೊಮ್ಮೆ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ. ಮುಂದಿನ ಮೌಲ್ಯಮಾಪನಗಳಲ್ಲಿ ಅರ್ಹತೆ ಪಡೆಯುವ ತಾಲೂಕುಗಳಲ್ಲೂ ಇದೇ ರೀತಿಯ ಗ್ರೌಂಡ್ ಟ್ರೂಥಿಂಗ್ ಮುಂದುವರಿಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಲಬುರಗಿಗೆ ಮಹತ್ವ: ಆಳಂದ ಮತ್ತು ಶಹಾಬಾದ ತಾಲೂಕುಗಳನ್ನು ‘ತೀವ್ರ ಬರ’ ವರ್ಗದಲ್ಲಿ ಗುರುತಿಸಿರುವುದು ಗಮನಾರ್ಹವಾಗಿದ್ದು, ಕ್ಷೇತ್ರ ಪರಿಶೀಲನೆಯ ಫಲಿತಾಂಶದ ಬಳಿಕ ಈ ತಾಲೂಕುಗಳ ಬರಪೀಡಿತ ಸ್ಥಾನಮಾನ ಮತ್ತು ಮುಂದಿನ ಪರಿಹಾರ ಕ್ರಮಗಳ ಕುರಿತು ಸ್ಪಷ್ಟತೆ ದೊರೆಯಲಿದೆ.