ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಗೌರಿ-ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕೆಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಗಣೇಶ ಚತುರ್ಥಿ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ ಸೆಪ್ಟೆಂಬರ್ 14 ರಿಂದ 5ನೇ, 9ನೇ, 11ನೇ ಹಾಗೂ 21ನೇ ದಿನಗಳ ಗಣಪನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಜಿಲ್ಲೆಯಾದ್ಯಂತ ಎಲ್ಲಿಯೂ ಶಾಂತಿ ಕದಡುವಂತೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಸಂಭ್ರಮದಿಂದ ವಿಘ್ನ ವಿನಾಯಕನ ಹಬ್ಬ ಆಚರಿಸುವಂತೆ ಆಯೋಜಕರಿಗೆ ಸೂಚಿಸಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆಯೋಜಕರಿಗೆ ಸುಲಭವಾಗಿ ಅನುಮತಿ ಪಡೆಯಲು ಕಲಬುರಗಿ ನಗರಕ್ಕೆ ಸೀಮಿತವಾಗಿ ಮಹಾನಗರ ಪಾಲಿಕೆಯ ಟೌನ್ ಹಾಲ್ ಹಾಗೂ ಆಯಾ ತಾಲೂಕುಗಳಲ್ಲಿ ‘ಸಿಂಗಲ್ ವಿಂಡೋ’ ಸಿಸ್ಟಮ್ ತೆರೆಯಲಾಗುತ್ತದೆ. ಆಯೋಜಕರು ಇಲ್ಲಿಯೇ ಅರ್ಜಿ ಸಲ್ಲಿಸಿ ಒಂದೇ ಸೂರಿನಡಿ ಎಲ್ಲದಕ್ಕೂ ಅನುಮತಿ ಪಡೆಯಬಹುದಾಗಿದೆ. ಸಿಂಗಲ್ ವಿಂಡೋ ಸಿಸ್ಟಮ್‌ನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಪ್ರತಿನಿಧಿಗಳು ಹಾಜರಿದ್ದು, ತ್ವರಿತಗತಿಯಲ್ಲಿ ಅನುಮತಿ ನೀಡಲು ನೆರವಾಗಬೇಕೆಂದು ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.
ಹಬ್ಬದ ಸಂದರ್ಭದಲ್ಲಿ ಎಲ್ಲಿಯೂ ನೀರಿನ ಅಭಾವ ಉಂಟಾಗದಂತೆ ಮತ್ತು ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ನಗರದಲ್ಲಿ ಮೆರವಣಿಗೆ ಮಾರ್ಗದಲ್ಲಿ ಅವಶ್ಯವಿದ್ದಕಡೆ ಮರದ ರೆಕ್ಕೆಗಳನ್ನು ಕತ್ತರಿಸುವುದು ಮತ್ತು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಸುಗಮ ಮೆರವಣಿಗೆಗೆ ಅವಕಾಶ ಮಾಡಿಕೊಡಬೇಕು. ನಿರ್ದಿಷ್ಟ ಸ್ಥಳದಲ್ಲಿ ತಾತ್ಕಾಲಿಕ ‘ಮೊಬೈಲ್ ವಿಸರ್ಜನಾ ತೊಟ್ಟಿಗಳ’ ವ್ಯವಸ್ಥೆ ಮಾಡುವಂತೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ತಾಲೂಕಾ ಹಂತದ ಇತರೆ ಅಧಿಕಾರಿಗಳಿಗೆ ಸೂಚಿಸಿದ ಡಿ.ಸಿ. ಅವರು ಸುಗಮ ಸಂಚಾರಕ್ಕೆ ಹೆಚ್ಚುವರಿ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸುವಂತೆಯೂ ಪೊಲೀಸ್ ಇಲಾಖೆಗೆ ಸೂಚಿಸಿದರು.
ಪರಿಸರ ಸ್ನೇಹಿ ಗಣಪನನ್ನು ಪ್ರತಿಷ್ಠಾಪಿಸಿ:
ಪಿ.ಓ.ಪಿ ಹಾಗೂ ರಾಸಾಯನಿಕ ಬಣ್ಣದಿಂದ ತಯಾರಿಸಿದ ಗಣಪನ ಮೂರ್ತಿಗಳನ್ನು ನದಿ, ಕಾಲುವೆ, ಬಾವಿ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಜತೆಗೆ ಪರಿಸರಕ್ಕೆ ತೀವ್ರ ಹಾನಿಯಾಗುವುದರಿಂದ ಇವುಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಜಿಲ್ಲೆಯ ಸಾರ್ವಜನಿಕರು ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ಮಾತ್ರ ಪ್ರತಿಷ್ಠಾಪಿಸುವ ಮೂಲಕ ಪರಿಸರ ಸಂರಕ್ಷಣೆಗೂ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮನವಿ ಮಾಡಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಮತ್ತು ಎಸ್.ಪಿ. ಅಡ್ಡೂರು ಶ್ರೀನಿವಾಸುಲು ಮಾತನಾಡಿ, ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಪ್ರತಿಯೊಂದು ಗಣೇಶ ಮಂಡಳಿಯು ಕಡ್ಡಾಯವಾಗಿ ಅನುಮತಿ ಪಡೆದು ಗಣೇಶನನ್ನು ಪ್ರತಿಷ್ಠಾಪನೆ ಮಾಡಬೇಕು. ಪೆಂಡಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗಲು-ರಾತ್ರಿ ಶಿಸ್ತು ಪರಿಪಾಲನೆಗಾಗಿ ಸ್ವಯಂಸೇವಕರನ್ನು ನಿಯೋಜಿಸಬೇಕು. ಪೆಂಡಾಲ್‌ಗಳಿಗೆ ಪೊಲೀಸ್ ಇಲಾಖೆಯಿಂದ ಡೇ ಮತ್ತು ನೈಟ್ ಪೆಟ್ರೋಲಿಂಗ್ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಪೆಂಡಾಲ್‌ಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಬೆಂಕಿ ಅವಘಡ ತಡೆಯುವ ಸುರಕ್ಷತಾ ಕ್ರಮಗಳು ಹಾಗೂ ಮುಂಜಾಗ್ರತೆಯಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಶೇ.65ರಷ್ಟು ಮೂರ್ತಿಗಳು 5ನೇ ದಿನದಂದು ವಿಸರ್ಜನೆಯಾಗುವುದರಿಂದ ಸಂಚಾರ ದಟ್ಟಣೆ ತಪ್ಪಿಸಲು ಮೆರವಣಿಗೆಯ ವೇಳೆಯಲ್ಲಿ ಮುಂಚಿತವಾಗಿ ಯೋಜಿತ ರೀತಿಯಲ್ಲಿ ಸಮಯ ಪರಿಪಾಲನೆ ಮಾಡಬೇಕು ಎಂದು ತಿಳಿಸಿದರು.
ಸುಳ್ಳು ಸುದ್ದಿಗೆ ಕಿವಿಗೊಡಬೇಡಿ:
ಹಬ್ಬದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಯಾವುದೇ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ವಿವಾದಾತ್ಮಕ ಫ್ಲೆಕ್ಸ್/ಬ್ಯಾನರ್‌ಗಳನ್ನು ಅಳವಡಿಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮದ್ಯಪಾನ ಮಾಡಿ ಹಬ್ಬದ ವಾತಾವರಣ ಕೆಡಿಸುವವರ ಮೇಲೆಯೂ ಪೊಲೀಸ್ ಇಲಾಖೆ ನಿಗಾ ವಹಿಸಲಿದೆ. ಸಾರ್ವಜನಿಕರು ಹಾಗೂ ಆಯೋಜಕರು ಯಾವುದೇ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಸಂಪರ್ಕಿಸಬೇಕು ಎಂದು ಡಾ.ಎಸ್.ಡಿ. ಶರಣಪ್ಪ ಮತ್ತು ಅಡ್ಡೂರು ಶ್ರೀನಿವಾಸುಲು ಅವರು ಆಯೋಜಕರಿಗೆ ತಿಳಿಸಿದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ್ ಶಿಂಧೆ, ಡಿ.ಸಿ.ಪಿ ಶಾಲು, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಂತಿ ಸಮಿತಿ ಸದಸ್ಯರು, ವಿವಿಧ ಸಮುದಾಯದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.