COTPA ರಾಜ್ಯ ತಿದ್ದುಪಡಿ–2024 ಹಾಗೂ PECA–2019 ಕುರಿತು ಪೊಲೀಸ್ ಅಧಿಕಾರಿಗಳಿಗೆ ಸಂವೇದನಾಶೀಲ ಕಾರ್ಯಾಗಾರ
ಕಲಬುರಗಿ: ತಂಬಾಕು ಮುಕ್ತ ಸಮಾಜ ಹಾಗೂ ಆರೋಗ್ಯಕರ ಭವಿಷ್ಯ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಕರೆ ನೀಡಿದರು.
ಕಲಬುರಗಿ ನಗರದ ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಗೃಹ ಇಲಾಖೆ ಹಾಗೂ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ಸಹಯೋಗದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ “COTPA ರಾಜ್ಯ ತಿದ್ದುಪಡಿ–2024ರ ನಿಬಂಧನೆಗಳು, PECA–2019 ಹಾಗೂ ಇತರ ಕಾನೂನುಗಳ ಕುರಿತು ಸಂವೇದನಾಶೀಲ ಕಾರ್ಯಾಗಾರ” ಉದ್ಘಾಟಿಸಿ ಅವರು ಮಾತನಾಡಿದರು.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್ ಅವರು ಜಂಟಿಯಾಗಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಕಾರ್ಯಾಗಾರದಲ್ಲಿ ಮಾತನಾಡಿದ ಡಾ. ಶರಣಪ್ಪ ಎಸ್.ಡಿ. ಅವರು, COTPA–2003ರ ರಾಜ್ಯ ತಿದ್ದುಪಡಿ–2024ರ ಪ್ರಮುಖ ಅಂಶಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ, ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟದ ಮೇಲಿನ ನಿರ್ಬಂಧ ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತು ಮತ್ತು ಪ್ರಚಾರದ ಮೇಲಿನ ನಿಯಂತ್ರಣಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅದೇ ರೀತಿ PECA–2019 (Prohibition of Electronic Cigarettes Act) ಅಡಿಯಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ಗಳ ಉತ್ಪಾದನೆ, ಆಮದು, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತುಗಳಿಗೆ ಸಂಬಂಧಿಸಿದ ನಿಷೇಧಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು.
ಕಲಬುರಗಿ ನಗರದಲ್ಲಿ ಸಾರ್ವಜನಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳ ಆವರಣ ಹಾಗೂ ರಸ್ತೆಗಳಲ್ಲಿ ಧೂಮಪಾನ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ನಿಯಮಾನುಸಾರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕು, ಗುಟ್ಕಾ ಸೇರಿದಂತೆ ದುಶ್ಚಟಗಳಿಂದ ಯುವಜನತೆ ದೂರವಿರುವಂತೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ತಂಬಾಕು ಹಾಗೂ ಗುಟ್ಕಾ ಸೇವನೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯೂ ಇಂತಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
COTPA ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಈ ಹಿಂದೆ ವಿಧಿಸಲಾಗುತ್ತಿದ್ದ ₹500 ದಂಡದ ಬದಲಾಗಿ ರಾಜ್ಯ ತಿದ್ದುಪಡಿ–2024ರ ಅನ್ವಯ ₹1,000 ದಂಡ ವಿಧಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು. ಅಲ್ಲದೆ, ನಗರದಾದ್ಯಂತ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಅಳವಡಿಸಿ, ನಿಯಮಿತವಾಗಿ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನವದೆಹಲಿಯ ವೈಟಲ್ ಸ್ಟ್ರಾಟಜಿ ಸಂಸ್ಥೆಯ ಉಪ ನಿರ್ದೇಶಕ ಡಾ. ಅಮಿತ್ ಯಾದವ್ ಅವರು COTPA–2003ರ ರಾಜ್ಯ ತಿದ್ದುಪಡಿ–2024ರ ಪ್ರಮುಖ ಅಂಶಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳ ಮಾರಾಟದ ನಿರ್ಬಂಧ ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತು ಮತ್ತು ಪ್ರಚಾರದ ಮೇಲಿನ ನಿಯಂತ್ರಣಗಳ ಕುರಿತು ವಿವರಿಸಿದರು.
ಎಸ್ಎಸ್ಎಲ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹೇಶ್ವರಿ ಹಿರೇಮಠ್ ಹಾಗೂ ರಾಜ್ಯ ತಂಬಾಕು ನಿಯಂತ್ರಣ ಕೋಶ, ಬೆಂಗಳೂರಿನ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ ಅವರು COTPA ಕಾಯ್ದೆಯಡಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಜಾರಿಗೊಳಿಸಲಾಗಿರುವ ಪ್ರಮುಖ ಕಾನೂನು ನಿಯಮಗಳು ಮತ್ತು ಅವುಗಳ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ COTPA ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ದಂಡ ವಿಧಿಸುವ ಕುರಿತು ಹಾಗೂ ತಂಬಾಕು ವಿರೋಧಿ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಪಿ ಶಾಲೂ ವೇದಿಕೆಯ ಮೇಲಿದ್ದರು.
ಕಾರ್ಯಾಗಾರದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸುಜಾತಾ ಪಾಟೀಲ, ಸಮಾಜ ಕಾರ್ಯಕರ್ತೆ ಆರತಿ ಧನಶ್ರೀ, ಸೈಕಾಲಜಿಸ್ಟ್ ಹಾಗೂ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ, ಗಣಕಯಂತ್ರ ಸಹಾಯಕ ರವಿಕುಮಾರ್ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.