Shubhashaya News

ಯುವತಿ ಅತ್ಯಾಚಾರ–ಕೊಲೆ ಪ್ರಕರಣ: ಆರೋಪಿಗಳಿಗೆ ಕಠಿಣ ಶಿಕ್ಷೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

ಕಲಬುರಗಿ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ಕರಣಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ನಗರದ ಜಗತ್‌ ಸರ್ಕಲ್‌ನಲ್ಲಿ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಯಚೂರು ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದ ದೇವದುರ್ಗ ತಾಲೂಕಿನ ಬೊಮ್ಮಾನಂದ, ಲಿಂಗಸೂರು ತಾಲೂಕಿನ ರಾಣಮ್ಮ ಹಾಗೂ ಸಿರವಾರ ತಾಲೂಕಿನ ಹೊಕ್ಕರಣಿ ಗ್ರಾಮದ ಅಶ್ವಿನಿ ಸೇರಿದಂತೆ ಮೂವರು ಬರ್ಬರವಾಗಿ ಹತ್ಯೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ಅಶ್ವಿನಿ ಅವರು ಸಂಜೆ ಬಯಲು ಪ್ರದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡ ಅವರನ್ನು ಸುತ್ತುವರಿದು, ರಕ್ಷಣೆಗಾಗಿ ಅವರು ಕೂಗಿಕೊಂಡಾಗ ಸಹಾಯಕ್ಕೆ ಬರಲು ಮುಂದಾದವರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿ ಬಾವಿಗೆ ಎಸೆದಿರುವುದು ಅತ್ಯಂತ ಅಮಾನವೀಯ ಕೃತ್ಯವಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಈ ಪ್ರಕರಣವು ಪೂರ್ವನಿಯೋಜಿತ ಸಂಚಿನ ಭಾಗವಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ದಲಿತ ಮಹಿಳೆಯರು, ಬಾಲಕಿಯರು ಹಾಗೂ ಗ್ರಾಮೀಣ ಪ್ರದೇಶದ ಅಸ್ಪೃಶ್ಯ ಸಮುದಾಯದ ಜನರಿಗೆ ಇನ್ನೂ ಸೂಕ್ತ ಭದ್ರತೆ ದೊರೆಯುತ್ತಿಲ್ಲ. ಅತ್ಯಾಚಾರ, ಕೊಲೆ, ದೌರ್ಜನ್ಯ, ಹಿಂಸೆ ಹಾಗೂ ಜಾತಿ ತಾರತಮ್ಯದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಸಾಮಾನ್ಯ ಘಟನೆಗಳಂತೆ ಪರಿಗಣಿಸದೆ, ಆರೋಪಿಗಳ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಅಪರಾಧ ತಡೆಗೆ ಪೊಲೀಸ್ ಇಲಾಖೆಗೆ ಆಧುನಿಕ ತಂತ್ರಜ್ಞಾನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದ್ದರೂ ಅಪರಾಧಗಳು ಮುಂದುವರಿಯುತ್ತಿರುವುದು ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.

ಕರ್ತವ್ಯಲೋಪ, ಭ್ರಷ್ಟಾಚಾರ ಹಾಗೂ ಗಂಭೀರ ಪ್ರಕರಣಗಳ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು. ತಪ್ಪಿತಸ್ಥರೆಂದು ಸಾಬೀತಾದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಧರಣಿಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ಮರಿಯಪ್ಪ ಹಳ್ಳಿ, ಮಲ್ಲಿಕಾರ್ಜುನ ಕ್ರಾಂತಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪೂರ, ರಾಜಕುಮಾರ ನಿಂಬಾಳ, ಶಿವಕುಮಾರ ಕೋರಳ್ಳಿ, ಪ್ರೀತಮ ನಾಕಮನ, ಮಹೇಶ ಕೋಕಿಲೆ, ಕುಮಾರ ಕುಳಗೇರಿ, ಸಾಯಬಣ್ಣ ಕೋಕಟನೂರ, ಪರಶುರಾಮ ರಾಜಾಪೂರ, ರಾಮಣ್ಣ ಪಾಸ್ವನ, ರಾಜಶೇಖರ ಹೊಸಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave A Reply

Your email address will not be published.