ಕಲಬುರಗಿ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಬುಧವಾರ ಶಹಾಬಾದ ರಸ್ತೆಯ ನಂದೂರು-ಕೆಸರಟಗಿ ವಸಾಹತು ಪ್ರದೇಶದ 3ನೇ ಹಂತದಲ್ಲಿ ಸುಮಾರು 290 ಕೋಟಿ ರೂ. ಹೂಡಿಕೆಯೊಂದಿಗೆ ನಿರ್ಮಾಣವಾಗುತ್ತಿರುವ ಮೆ. ಡೇರಿ ಕ್ಲಾಸಿಕ್ ಐಸ್ ಕ್ರೀಮ್ ಘಟಕ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸುಮಾರು 60 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಉದ್ದೇಶಿತ ಘಟಕವು ಐಸ್ ಕ್ರೀಮ್, ಫ್ರೋಜನ್ ಡೆಸರ್ಟ್, ಕುಲ್ಫಿ ಸೇರಿದಂತೆ ಡೇರಿ ಪದಾರ್ಥಗಳ ಉತ್ಪನ್ನ ಜೊತೆಗೆ ಕೋಲ್ಡ್ ಸ್ಟೋರೇಜ್ ಘಟಕ ಹೊಂದಿದ್ದು, ಇದರ ಸ್ಥಾಪನೆಯಿಂದ ಸ್ಥಳೀಯವಾಗಿ 900 ಜನರಿಗೆ ಉದ್ಯೋಗ ಸಿಗುವ ಅಂದಾಜು ಹೊಂದಲಾಗಿದೆ. ಇದಲ್ಲದೆ ಡೇರಿ ಘಟಕಕ್ಕೆ ಪೂರಕವಾಗಿ ಕೈಗಾರಿಕೆಗಳು ಸಹ ಇಲ್ಲಿಗೆ ಬರಲಿರುವುದರಿಂದ ಸ್ಥಳೀಯ ಆರ್ಥಿಕ ವೇಗವಾಗಿ ಬೆಳೆಯಲು ಸಹಕಾರಿಯಾಗಲಿದೆ.
ಇದೇ ಸಂದರ್ಭದಲ್ಲಿ ವಸಾಹತು ಪ್ರದೇಶದಲ್ಲಿನ ದಾಲ್ ಮಿಲ್ ಉದ್ದಿಮೆದಾರರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸಿದ ಡಿ.ಸಿ ಅವರು, ವಸಾಹತು ಪ್ರದೇಶದಲ್ಲಿ (ಮಹಿಳಾ ಪಾರ್ಕ್) ಒಳಗೊಂಡಂತೆ ಕೈಗಾರಿಕೆ ಸ್ಥಾಪಿಸಲು ನಿವೇಶನ ಪಡೆದು ನಿಗದಿತ ಅವಧಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸದ ನಿವೇಶನಗಳನ್ನು ಕೂಡಲೆ ಸರ್ವೆ ಮಾಡಿ ಗುರುತಿಸಿ ಅವುಗಳನ್ನು ರದ್ದುಗೊಳಿಸಿ ಸದರಿ ನಿವೇಶನಗಳನ್ನು ಹೊಸ ಉದ್ದಿಮೆಗಳಿಗೆ ಹಂಚಿಕೆ ಮಾಡಲು ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಲ್ಲದೆ ಇದೇ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ರಾಜ್ಯ ಸರ್ಕಾರದಿಂದ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಕಾರ್ಯ ನೆನೆಗುದ್ದಿಗೆ ಬಿದ್ದಿದನ್ನು ಅರಿತ ಜಿಲ್ಲಾಧಿಕಾರಿಗಳು, ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಇದಕ್ಕಿರುವ ಅಡೆತಡೆ ಕೂಡಲೆ ನಿವಾರಿಸುವಂತೆ ಡಿ.ಐ.ಸಿ. ಜಂಟಿ ನಿರ್ದೇಶಕರಿಗೆ ಡಿ.ಸಿ. ಸೂಚಿಸಿದರು.
ಆಟೋಮೋಬೈಲ್ ಕ್ಲಸ್ಟರ್ ಸ್ಥಳ ಪರಿಶೀಲನೆ:
ಅಟೋಮೋಬೈಲ್ ಘಟಕಗಳನ್ನು ಒಂದೇ ಕಡೆ ಸ್ಥಾಪಿಸುವ ಉದ್ದೇಶಿತ ಕಪನೂರ ಆಟೋಮೋಬೈಲ್ ಕ್ಲಸ್ಟರ್ ಸ್ಥಾಪನೆ ಸ್ಥಳಕ್ಕೂ ಡಿ.ಸಿ. ಅವರು ಭೇಟಿ ನೀಡಿ ಪರಿಶೀಲಿಸಿದರು. ಈಗಾಗಲೆ ಕೆ.ಐ.ಎ.ಡಿ.ಬಿ. ನಿಂದ 20 ಎಕರೆ ಪ್ರದೇಶ ಆಟೋ ಕ್ಲಸ್ಟರ್ ಗೆ ಮೀಸಲಿರಿಸಿದ್ದು, ಎಂ.ಎಸ್.ಸಿ.ಸಿ.ಡಿ.ಪಿ ಯೋಜನೆಯಡಿ ಅನುಮೋದನೆಗೆ ಸರ್ಕಾರದ ಹಂತದಲ್ಲಿ ಬಾಕಿ ಇದೆ ಎಂದು ಯೋಜನೆ ಕುರಿತು ಡಿ.ಸಿ. ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಡಿ.ಸಿ ಅವರು ಇಲ್ಲಿನ ವಿವಿಧ 15 ಘಟಕಗಳ ಕಾರ್ಯವನ್ನು ಪರಿಶೀಲಿಸಿದರು.
ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಕೆ.ಐ.ಎ.ಡಿ.ಬಿ ಕಾರ್ಯನಿರ್ವಾಹಕ ಅಭಿಯಂತ ನಾಗೇಶ, ಎ.ಇ.ಇ. ಪರಮೇಶ ಎ.ಇ. ಅನೀಲ ಮತ್ತು ಪ್ರಕಾಶ, ಜವಳಿ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಿ.ವಿಠ್ಠಲ ರಾಜು, ಉಪನಿರ್ದೇಶಕ ರಾಘವೇಂದ್ರ ಎಸ್. ಹೊಸಮನಿ ಇದ್ದರು.