Shubhashaya News

ಗುಲಬರ್ಗಾ ಉತ್ತರ ಮತ್ತು ದಕ್ಷಿಣ ಕರಡು ಮತದಾರರ ಪಟ್ಟಿ ಪ್ರಕಟ: ಸೆ.23ರ ವರೆಗೆ ಆಕ್ಷೇಪಣೆಗೆ ಅವಕಾಶ

ಕಲಬುರಗಿ: ಕಲಬುರಗಿ ಉತ್ತರ-45 ವಿಧಾನಸಭಾ ಕ್ಷೇತ್ರದ ಎಸ್.ಐ. ಆರ್ ಪ್ರಕ್ರಿಯೆ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ, ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಹೇಳಿದರು.

ಸೋಮವಾರ ನಗರದ ಕಲಬುರಗಿ ಮಹಾನಗರ ಪಾಲಿಕೆಯ ಟೌನ್ ಹಾಲ್ ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದ ಮತ್ತು ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್.ಐ.ಆರ್. ಕರಡು ಪಟ್ಟಿ ಪ್ರಕಟ ಕುರಿತಂತೆ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಕ್ಷೇತ್ರದಲ್ಲಿ 1,14,271 ಪುರುಷ, 1,15,685 ಮಹಿಳೆ, ಇತರೆ 41 ಸೇರಿ ಒಟ್ಟು 2,29,997 ಮತದಾರರಿದ್ದಾರೆ ಎಂದರು.

ಎಸ್.ಐ.ಆರ್. ಪ್ರಕ್ರಿಯೆ ಮುನ್ನ ಇದ್ದ ಒಟ್ಟು 3,35,254 ಮತದಾರರಲ್ಲಿ 8,048 ಮೃತರು, 17,833 ಗೈರು ಹಾಜರಾದವರು, 64,866 ಶಾಶ್ವತವಾಗಿ ಸ್ಥಳಾಂತರಗೊಂಡವರು, 5,179 ಈಗಾಗಲೆ ನೋಮದಾಯಿಸಿದವರು ಹಾಗೂ 9,331 ಇತರ ವ್ಯತ್ಯಾಸಗಳು ಸೇರಿ ಒಟ್ಟು 1,05,257 ಮತದಾರರ ಪಟ್ಟಿಯೊಂದ ಹೊರಗುಳಿದಿದ್ದಾರೆ. ಇನ್ನು ಕರಡು ಪಟ್ಟಿಯಲ್ಲಿ 9,597 ಅನೋಮಲೀಸ್ ಹಾಗೂ 16,261 ನೋ ಮ್ಯಾಪಿಂಗ್ ಪ್ರಕರಣಗಳು ಪತ್ತೆಯಾಗಿದ್ದು, ಇಂತಹ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದರು.

ನೋ-ಮ್ಯಾಪಿಂಗ್ ಹಾಗೂ ಅಸಂಗತತೆ ಹೊಂದಿರುವ ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿಯೇ ವಿಚಾರಣೆ ನಡೆಸಲು ಹೆಚ್ಚುವರಿಯಾಗಿ 14 ಎಇಆರ್‌ಒಗಳನ್ನು ನಿಯೋಜಿಸಲು ಶಿಫಾರಸು ಮಾಡಲಾಗಿದೆ ಎಂದ ಅವಿನಾಶ ಶಿಂಧೆ ಅವರು, ನೋಟಿಸ್ ಹಾಗೂ ಹಕ್ಕು-ಆಕ್ಷೇಪಣೆಗಳ ವಿಚಾರಣೆ ಪ್ರಕ್ರಿಯೆಯನ್ನು ಅಕ್ಟೋಬರ್ 22ರೊಳಗೆ ಪೂರ್ಣಗೊಳಿಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ದಕ್ಷಿಣದಲ್ಲಿ 1.96 ಲಕ್ಷ ಮತದಾರರು:

ಮಹಾನಗರ ಪಾಲಿಕೆ ಉಪ ಆಯುಕ್ತೆ ಪ್ರಮೀಳಾ ಅವರು ಮಾತನಾಡಿ, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಐ.ಆಶರ್. ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, 96,481 ಪುರುಷ, 1,00,008 ಮಹಿಳೆ, ಇತರೆ 33 ಸೇರಿ ಒಟ್ಟು 1,96,522 ಮತದಾರರಿದ್ದಾರೆ. ಇವರಲ್ಲಿ 1,312 ಯುವ ಮತದಾರರು ಹಾಗೂ 1,702 ವಿಕಲಾಂಗ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಲಿಂಗಾನುಪಾತ 1,037 ಇದೆ ಎಂದರು.

ಪಟ್ಟಿಯಲ್ಲಿ 12,648 ಅಸಂಗತ ಮತ್ತು 18,429 ಮ್ಯಾಪಿಂಗ್ ಆಗದ ಮತದಾರರು ಸೇರಿ ಒಟ್ಟು ಸುಮಾರು 31,000 ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯಲಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು 16 ಹೆಚ್ಚುವರಿ ಎ.ಇ.ಆರ್.ಓ ಗಳನ್ನು ನೇಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮತಗಟ್ಟೆ ಹಂತದಲ್ಲಿ 5 ರಿಂದ 6 ಕೇಂದ್ರಗಳನ್ನು ವಿಲೀನಗೊಳಿಸಿ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಅರ್ಹ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಪಟ್ಟಿಯಿಂದ ಹೆಸರು ಬಿಟ್ಟುಹೋಗಿದ್ದರೆ ಸೇರ್ಪಡೆಗೆ ಫಾರ್ಮ್ 6, ತಿದ್ದುಪಡಿಗೆ ಫಾರ್ಮ್ 8 ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಪೂರ್ಣ ಸಹಕಾರ ನೀಡಬೇಕೆಂದರು.

Leave A Reply

Your email address will not be published.