Shubhashaya News

ಸೇಡಂನಲ್ಲಿ ಗೂಂಡಾಗಿರಿಗೆ ಅವಕಾಶವಿಲ್ಲ: ಸಚಿವ ಡಾ. ಶರಣಪ್ರಕಾಶ ಪಾಟೀಲ

ರಂಜೋಳದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆಗೆ ಸಚಿವರ ಖಂಡನೆ

ಸೇಡಂ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಪರಸ್ಪರ ಗೌರವಕ್ಕೆ ಆದ್ಯತೆ ನೀಡಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು ಹಾಗೂ ಗೂಂಡಾಗಿರಿ ನಡೆಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ ಎಚ್ಚರಿಕೆ ನೀಡಿದರು.

ತಾಲೂಕಿನ ರಂಜೋಳ ಗ್ರಾಮದಲ್ಲಿ ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಒಂಬತ್ತು ಗ್ರಾಮ ದೇವತೆಗಳ ದೇವಸ್ಥಾನಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗ್ರಾಮದಲ್ಲಿ ನಡೆದ ಅಹಿತಕರ ಘಟನೆಗೆ ಬೇಸರ ವ್ಯಕ್ತಪಡಿಸಿದರು.

“ರಂಜೋಳ ಗ್ರಾಮದ ಜನರು ಅಹಿತಕರ ಘಟನೆ ನಡೆದರೂ ಸಹನೆ ಹಾಗೂ ಶಾಂತಿಯಿಂದ ನಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಅವರ ತಾಳ್ಮೆಗೆ ಅಭಿನಂದನೆ ಸಲ್ಲಿಸಬೇಕು. ರಾಜಕೀಯ ಕಾರಣಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಪದೇಪದೇ ಅಡ್ಡಿಪಡಿಸಿ ತಮ್ಮ ಹಿಡಿತ ಸಾಧಿಸಲು ಯತ್ನಿಸುವುದು ಸರಿಯಾದ ಬೆಳವಣಿಗೆಯಲ್ಲ. ನಾನು ಸೇಡಂ ಕ್ಷೇತ್ರದ ಶಾಸಕನಾಗಿರುವವರೆಗೂ ಇಂತಹ ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ,” ಎಂದು ಹೇಳಿದರು.

ಅಧಿಕಾರ ಇಲ್ಲದಿರುವಾಗಲೇ ರಂಪಾಟ ನಡೆಸುವವರು ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪರೋಕ್ಷವಾಗಿ ವಿರೋಧಿಗಳಿಗೆ ತಿರುಗೇಟು ನೀಡಿದರು.

“ನಾವು ಶಾಂತಿಯನ್ನು ಬಯಸುವವರು. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶವಿದ್ದರೂ, ಪ್ರತಿಯೊಂದು ವಿಚಾರವನ್ನೂ ಸಂಘರ್ಷದ ಮೂಲಕ ಎದುರಿಸುವುದು ನಮ್ಮ ಉದ್ದೇಶವಲ್ಲ. ಸುಮ್ಮನಿದ್ದೇವೆ ಎಂದರೆ ನಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದಲ್ಲ. ಸಮಯ ಬಂದಾಗ ಸೂಕ್ತ ಉತ್ತರ ನೀಡಲು ನಾವು ಸಿದ್ಧರಿದ್ದೇವೆ,” ಎಂದು ಸಚಿವರು ಹೇಳಿದರು.

ಸತೀಶರೆಡ್ಡಿ ವಾಗ್ದಾಳಿ

ರಂಜೋಳ ಗ್ರಾಮದ ಮುಖಂಡ ಸತೀಶರೆಡ್ಡಿ ರಂಜೋಳ ಮಾತನಾಡಿ, ತಾವು ರಾಜಕೀಯ ಅನಿವಾರ್ಯತೆಯಿಂದಲ್ಲ, ಸ್ವಇಚ್ಛೆಯಿಂದ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರೊಂದಿಗೆ ಇರುವುದಾಗಿ ಹೇಳಿದರು.

“ಸಜ್ಜನ ಹಾಗೂ ಒಳ್ಳೆಯ ವ್ಯಕ್ತಿ ಸೇಡಂ ಕ್ಷೇತ್ರಕ್ಕೆ ಬೇಕು ಎಂಬ ನಿಸ್ವಾರ್ಥ ಭಾವನೆಯಿಂದ ಅವರೊಂದಿಗೆ ಇದ್ದೇನೆ. ರಾಜಕೀಯ ಕಾರಣಕ್ಕಾಗಿ ವಿರೋಧ ಪಕ್ಷದವರು ಹಾಗೂ ಮಾಜಿ ಶಾಸಕರು ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ. ಇದಕ್ಕೆ ರಂಜೋಳದ ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ,” ಎಂದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರಿಗೆ ಪೂಜೆ ಮಾಡಲು ಅಡ್ಡಿಪಡಿಸಿದವರಿಗೆ ಸಮಾರಂಭಕ್ಕೆ ಹರಿದುಬಂದ ಜನಸ್ತೋಮವೇ ಉತ್ತರ ನೀಡಿದೆ ಎಂದು ಅವರು ಹೇಳಿದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರ ಹಿಂದೆ ಕೆಲವೇ ಸ್ಥಳೀಯ ಕಾರ್ಯಕರ್ತರಿದ್ದು, ಉಳಿದ ಬಹುತೇಕ ಗ್ರಾಮಸ್ಥರು ತಮ್ಮೊಂದಿಗೆ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಗುರುಮಠಕಲ್ ಶಾಖಾ ಮಠದ ಶ್ರೀಗಳು, ಗೌಡನಳ್ಳಿ ಶ್ರೀಗಳು, ಶರಣು ಬಿ. ಗದ್ದುಗೆ ಸೇರಿದಂತೆ ಬಸವರಾಜ ಪಾಟೀಲ, ರಾಜೂಗೌಡ ಬೆನಕಳ್ಳಿ, ರವಿ ಸಾಹುಕಾರ್ ತಂಬಾಕೆ, ನಾರಾಯಣರೆಡ್ಡಿ ರಂಜೋಳ, ರಶೀದ್ ರಂಜೋಳ, ರಾಜು ಬಳಗಾರ, ನರಸಿಂಹರೆಡ್ಡಿ, ವಿರೇಂದ್ರ ರುದ್ನೂರು, ರಾಮಯ್ಯ ಪೂಜಾರಿ, ಸತೀಶ್ ಪೂಜಾರಿ, ಉಮಾರೆಡ್ಡಿ ಹಂದರಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.