ಆಳಂದ: ಮಾದನ ಹಿಪ್ಪರಗಾ ವಲಯ ಮಟ್ಟದಲ್ಲಿ ನಡೆದ ಶಾಲಾ ಕ್ರೀಡಾಕೂಟದಲ್ಲಿ sಸರ್ಕಾರಿ ಹಿರಿಯ ಪ್ರಾಥಮಿಕ ಸಾವಳೇಶ್ವರ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಗುಂಪು ಪಂದ್ಯಾಟದಲ್ಲಿ ಬಾಲಕರ ಥ್ರೋಬಾಲ್ನಲ್ಲಿ ಪ್ರಥಮ ಸ್ಥಾನ, ಬಾಲಕಿಯರ ಥ್ರೋಬಾಲ್ನಲ್ಲಿ ಪ್ರಥಮ ಸ್ಥಾನ ಹಾಗೂ ಬಾಲಕಿಯರ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯಗುರು ದಯಾನಂದ ಮೈಂದರಗಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮಹಾದೇವ ಗುಣಕಿ ಹರ್ಷ ವ್ಯಕ್ತಪಡಿಸಿ, ತಾಲೂಕು ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸುವಂತೆ ಶುಭ ಹಾರೈಸಿದರು.
ಸಹ ಶಿಕ್ಷಕರಾದ ಬಸಮ್ಮ ಸ್ವಾಮಿ, ಶಿವಲೀಲಾ, ಜಯಶ್ರೀ, ರಾಜಶೇಖರ, ಶರಣಬಸಪ್ಪ, ಪರಮೇಶ್ವರ ಹಾಗೂ ಶ್ರೀಕಾಂತ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು. ಕ್ರೀಡೆಯಲ್ಲಿ ದೈಹಿಕ ಶಿಕ್ಷಣದ ಶಿಕ್ಷಕ ಮಹಾದೇವ ಗುಣಕಿ ಅವರ ನೇತೃತ್ವದಲ್ಲಿ ಶಾಲೆಯ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ ಕ್ರೀಡಾಕೂಟದಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಯ ಸರಣಿ ಮುಂದುವರೆದoತೆ ಈ ಬಾರಿಯ ವಿದ್ಯಾರ್ಥಿಗಳ ಸಾಧನೆಗೆ ಪೋಷಕರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.