Shubhashaya News

ಬೆಳೆ ವಿಮೆ ಪರಿಹಾರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಚಿಂಚೋಳಿ: ಸುಲೇಪೇಟ ಹೋಬಳಿ ವ್ಯಾಪ್ತಿಯ ಸುಮಾರು 40 ಗ್ರಾಮಗಳ ರೈತರಿಗೆ 2025–26ನೇ ಸಾಲಿನ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ, ಸುಲೇಪೇಟ ನಾಗರಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತರು ಶುಕ್ರವಾರ ಬಸವೇಶ್ವರ ವೃತ್ತದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು, ಸಾವಿರಾರು ರೂಪಾಯಿ ವಿಮಾ ಕಂತು ಪಾವತಿಸಿದ್ದರೂ ಕೆಲ ರೈತರ ಖಾತೆಗಳಿಗೆ ಕೇವಲ 100 ರಿಂದ 200ರವರೆಗೆ ಮಾತ್ರ ಪರಿಹಾರ ಜಮೆಯಾಗಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬೆಳೆ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಪರಿಹಾರ ದೊರೆಯದೆ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಕಳೆದ ಸಾಲಿನಲ್ಲಿ ಅತಿವೃಷ್ಟಿ ಹಾಗೂ ಪ್ರತಿಕೂಲ ಹವಾಮಾನದಿಂದ ಈ ಭಾಗದಲ್ಲಿ ಶೇ.70ರಿಂದ 80ರಷ್ಟು ಬೆಳೆ ಹಾನಿಯಾಗಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ವಿಮಾ ಕಂಪನಿಗಳಿಗೆ ಕೇವಲ ಶೇ.14ರಿಂದ 18ರಷ್ಟು ಮಾತ್ರ ಬೆಳೆ ಹಾನಿಯಾಗಿದೆ ಎಂಬ ವರದಿ ಸಲ್ಲಿಸಿರುವುದರಿಂದ ರೈತರಿಗೆ ಅಲ್ಪ ಪ್ರಮಾಣದ ವಿಮೆ ಪರಿಹಾರ ದೊರೆತಿದೆ ಎಂದು ಸಮಿತಿ ಪದಾಧಿಕಾರಿಗಳು ದೂರಿದರು.

ವಿಮೆ ಕಂಪನಿಗಳಿಗೆ ಸಲ್ಲಿಸಿರುವ ಬೆಳೆ ಹಾನಿ ವರದಿಯನ್ನು ಮರುಪರಿಶೀಲಿಸಿ, ವಾಸ್ತವಿಕ ಬೆಳೆ ನಷ್ಟದ ಆಧಾರದ ಮೇಲೆ ನ್ಯಾಯಯುತ ವಿಮೆ ಪರಿಹಾರವನ್ನು ಎಲ್ಲಾ ಅರ್ಹ ರೈತರಿಗೆ ಬಿಡುಗಡೆ ಮಾಡಬೇಕು. ಬಾಕಿ ಇರುವ ವಿಮೆ ಮೊತ್ತವನ್ನು ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

2026–27ನೇ ಸಾಲಿನಲ್ಲಿ ಚಿಂಚೋಳಿ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳು ಸಮರ್ಪಕವಾಗಿ ಬೆಳೆಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಚಿಂಚೋಳಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ವಿಶೇಷ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಳೆದ ಎರಡು-ಮೂರು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ನಿರಂತರ ಬೆಳೆ ನಷ್ಟ ಅನುಭವಿಸುತ್ತಿರುವ ರೈತರ ಸಾಲದ ಹೊರೆ ಕಡಿಮೆ ಮಾಡಲು ಸರ್ಕಾರ ಸಾಲಮನ್ನಾ ಸೇರಿದಂತೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಬಳಿಕ ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರುದ್ರಸೆಟ್ಟಿ ಪಡಶೆಟ್ಟಿ, ಪ್ರಕಾಶ ಸಜ್ಜನ, ಜಹಿರೋದ್ದೀನ್ ಪಟೇಲ್, ಶರಣಪ್ಪ ದೇಸಾಯಿ, ಮಲ್ಲಿಕಾರ್ಜುನ ದೇಸಾಯಿ, ನಾಗಸೆಟ್ಟಿ ಕೊಟಗಿ, ರಮೇಶ್ ದೇಸಾಯಿ, ಶರಣಬಸಪ್ಪ ಮಮಶೆಟ್ಟಿ, ಶರಣು ಸ್ವಂತ, ರುದ್ರಮುನಿ ರಾಮತೀರ್ಥಕರ್, ನಾಮದೇವ ಪಾಟೀಲ್, ಪ್ರಕಾಶ ಮಂತ್ರಿ, ನಾರಾಯಣ ರೆಡ್ಡಿ, ಮಲ್ಲಿಕಾರ್ಜುನ ಪಾಳದಿ, ನಂದು ಪಾಟೀಲ್, ಮಲ್ಲಿಕಾರ್ಜುನ ರಾಪಗೋಡ, ಮಲ್ಲಿಕಾರ್ಜುನ ಗುಲಗುಂಜಿ, ರಾಜು ಹೊಸಳ್ಳಿ, ಜಗನ್ನಾಥ ರೆಡ್ಡಿ, ಮಲ್ಲಿಕಾರ್ಜುನ ಮಾಳಗಿ, ಸಿದ್ದಯ್ಯ ಸ್ವಾಮಿ, ಸಂಜು ಕುಮಾರ, ವೀರಶೆಟ್ಟಿ ತಾರಾಪೂರ, ವೈಜನಾಥ ದಾದಿ, ಅಣವೀರ ಗೌನಳ್ಳಿ, ಮಲ್ಲಣ್ಣ ಶೆಳಗಿ, ರಾಜಶೇಖರ ದಬ್ಬಾ, ಶಿವರಾಮ ರಾಠೋಡ್, ಅಹ್ಮದ್ ಮೊಮನಿ, ನಾಗೇಶ ಚಾಂಗಲೇರಾ, ರವಿರಾಜ ರಾಠೋಡ್, ಶೆಕಪ್ಪ ಬಗಲಿ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.