Shubhashaya News

ಖದೀರ್ ಪಾಶಾ ಆತ್ಮಹತ್ಯೆ ಪ್ರಕರಣ: ಆರೋಪಿಗಳ ಬಂಧಿಸಿ, ಕುಟುಂಬಕ್ಕೆ ಪರಿಹಾರಕ್ಕೆ ಕಕರವೇ ಆಗ್ರಹ

ಕಲಬುರಗಿ : ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಬಡ ಸೆಂಟ್ರಿಂಗ್ ಕಾರ್ಮಿಕ ಖದೀರ್ ಪಾಶಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವಲಿಂಗ ಹಳಮನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಖದೀರ್ ಪಾಶಾ ಅವರು ಚಿತ್ತಾಪುರ ತಾಲೂಕಿನ ಶ್ರೀಸಿಮೆಂಟ್ ಕಂಪನಿ ಹಿಂಭಾಗದ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲು ಗುತ್ತಿಗೆದಾರರಾದ ವಿಜಯಕುಮಾರ ಚವ್ಹಾಣ ಹಾಗೂ ಅರವಿಂದ ಚವ್ಹಾಣ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಕೆಲಸ ಪೂರ್ಣಗೊಳಿಸಿದ್ದರು. ಆದರೆ, ಕರಾರಿನಂತೆ ನೀಡಬೇಕಿದ್ದ ಸುಮಾರು 15 ರಿಂದ 16 ಲಕ್ಷ ಹಣವನ್ನು ಕೇಳಿದಾಗ ಗುತ್ತಿಗೆದಾರರು ಜೀವ ಬೆದರಿಕೆ ಹಾಕಿದ್ದು, ರೌಡಿಗಳನ್ನು ಮನೆಗೆ ಕಳುಹಿಸಿ ಜೀವ ತೆಗೆಯುವುದಾಗಿ ಬೆದರಿಕೆ ಹಿನ್ನೆಲೆಯಲ್ಲಿ ಮನನೊಂದು ಖದೀರ್ ಪಾಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ರಟಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದ್ದರೂ ಇಲ್ಲಿಯವರೆಗೆ ಯಾವುದೇ ಆರೋಪಿಯನ್ನು ಬಂಧಿಸಿಲ್ಲ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರಕರಣ ಗೃಹ ಸಚಿವರ ಕ್ಷೇತ್ರದಲ್ಲಿಯೇ ನಡೆದಿರುವುದು ಅತ್ಯಂತ ಖಂಡನೀಯವಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಮತ್ತು ಅಗತ್ಯ ನೆರವು ಒದಗಿಸಬೇಕು ಎಂದು ಈ ಸಂದರ್ಭದಲ್ಲಿ ಕಾರ್ಯಕರ್ತರು ಒತ್ತಾಯಿಸಿದ ಅವರು ಮುಂದಿನ ಏಳು ದಿನಗಳೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂದೀಪ್ ಭರಣಿ, ವಿಶ್ವನಾಥ್, ಸತೀಶ್, ನಾಗರಾಜ್ ಪಾಟೀಲ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.