ಆಳಂದ: ತಡೋಳಾ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಸಭೆಯಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ವಿ ಪಾಟೀಲ್ ಮಾತನಾಡಿದರು. ಡಾ. ಯಲ್ಲಪ್ಪ ಇಂಗಳೆ, ಮೌಲಾ ಮುಲ್ಲಾ, ರಾಮಮೂರ್ತಿ ಗಾಯವಾಡ, ಕಲ್ಯಾಣಿ ಅವುಟೆ ಇತರರು ಇದ್ದರು.
ಆಳಂದ: ಹಾಲು ಉತ್ಪಾದನೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ತೀರಾ ಹಿಂದುಳಿದಿದ್ದು, ಇದಕ್ಕಾಗಿ ವಿಶೇಷ ಪ್ರಯತ್ನ ಅಗತ್ಯವಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ವಿ ಪಾಟೀಲ್ ಅಭಿಪ್ರಾಯಪಟ್ಟರು.
ತಾಲೂಕಿನ ತಡೋಳ ಗ್ರಾಮದ ಹಾಲು ಉತ್ಪಾದಕರ ಸಂಘದ ಆಶ್ರಯದಲ್ಲಿ ಆರೋಗ್ಯಕಾರಕ ನಿಸರ್ಗ ಹಾಗೂ ಕೃಷಿ ಯುವಕರಿಗಾಗಿ ಸ್ವಯಂ ಉದ್ಯೋಗ ಪಶುಪಾಲನೆ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ೧೫ರಿಂದ ೨೦ ವರ್ಷಗಳ ಅವಧಿಯಲ್ಲಿ ಉತ್ತರ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರತಿನಿತ್ಯ ೧.೨೦ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದರೆ, ಉತ್ತರ ಕರ್ನಾಟಕದ ೧೬ ಜಿಲ್ಲೆಗಳಲ್ಲಿ ಸೇರಿ ಕೇವಲ ೧೦ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಎಕರೆಗಟ್ಟಲೆ ಜಮೀನು ಇದ್ದರೂ ಹಾಲು ಉತ್ಪಾದನೆ ಕಡಿಮೆ ಇರುವುದನ್ನು ಪ್ರಸ್ತಾಪಿಸಿದ ಅವರು, ದಕ್ಷಿಣ ಕರ್ನಾಟಕದಲ್ಲಿ ಗುಂಟೆ ಲೆಕ್ಕದಷ್ಟು ಕಡಿಮೆ ಜಮೀನಿದ್ದರೂ ಒಂದೊAದು ಕುಟುಂಬವೇ ೫೦೦ ಲೀಟರ್ ಹಾಲು ಉತ್ಪಾದಿಸುತ್ತಿದೆ ಎಂದು ಹೋಲಿಸಿದರು. ಇಲ್ಲಿ ಇಡೀ ಗ್ರಾಮವೇ ಸೇರಿ ೫೦೦ ಲೀಟರ್ ಹಾಲು ಪೂರೈಸುತ್ತಿರುವಾಗ, ಅಲ್ಲಿ ಒಂದೇ ಮನೆ ಅಷ್ಟು ಪ್ರಮಾಣದ ಹಾಲು ಪೂರೈಸುತ್ತಿರುವುದು ಕಲ್ಯಾಣ ಕರ್ನಾಟಕದ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.
ಇದಕ್ಕೆ ಕಾರಣ ದಕ್ಷಿಣ ಕರ್ನಾಟಕದ ಮಹಿಳೆಯರ ಪರಿಶ್ರಮ ಹಾಗೂ ಕೃಷಿ, ಹೈನುಗಾರಿಕೆ, ಸಗಣಿ ತೆಗೆಯುವ ಕೆಲಸದ ಬಗ್ಗೆ ಇರುವ ಗೌರವಯುತ ಮನೋಭಾವ ಎಂದು ಅವರು ವಿವರಿಸಿದರು. ಅಲ್ಲಿ ಉನ್ನತ ಪದವೀಧರರೂ ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ಉತ್ತರ ಕರ್ನಾಟಕದ ಜನರಲ್ಲಿ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ರಾಜ್ಯದ ರಾಮನಗರ ಜಿಲ್ಲೆಯೊಂದರಲ್ಲೇ ದಿನಕ್ಕೆ ೨೦ ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಉತ್ತರ ಕರ್ನಾಟಕದ ಜನರು ದುಡಿಯಲು ದಕ್ಷಿಣ ಭಾಗಕ್ಕೆ ವಲಸೆ ಹೋಗುತ್ತಿದ್ದರೆ, ದಕ್ಷಿಣ ಭಾಗದ ಜನರು ಸ್ವಾವಲಂಬಿಗಳಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕುಟುಂಬ ವಿಭಜನೆಯೂ ಹೈನುಗಾರಿಕೆ ಹಾಗೂ ಕೃಷಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ವ್ಯವಸಾಯದಿಂದ ನಷ್ಟ ಎಂದು ಕೈಚೆಲ್ಲಿ ಕುಳಿತುಕೊಳ್ಳದೆ ಶ್ರಮ ಹಾಗೂ ತಂತ್ರಜ್ಞಾನ ಬಳಸಿಕೊಂಡರೆ ಬಡತನ ಬಾರದೆ, ಸಾಲಕ್ಕೆ ಕೈಚಾಚುವ ಪರಿಸ್ಥಿತಿಯೂ ಎದುರಾಗದೆ ಸ್ವಾವಲಂಬಿಗಳಾಗಲು ಸಾಧ್ಯವಿದೆ ಎಂದು ಕರೆ ನೀಡಿದರು. ಸಾವಯವ ಗೊಬ್ಬರ ಹಾಗೂ ಪಶುಸಂಪತ್ತಿನ ಸಗಣಿ ಗೊಬ್ಬರವನ್ನು ಮರೆತಿರುವುದರಿಂದ ಭೂಮಿಗೆ ಗುಣಮಟ್ಟದ ಪೋಷಕಾಂಶ ದೊರೆಯದೆ ಭೂಮಿಯೂ ರೋಗಗ್ರಸ್ತವಾಗುತ್ತಿದ್ದು, ಇದು ಮಾನವರ ಆರೋಗ್ಯ ಹಾಗೂ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಪ್ರತಿದಿನ ಕೇವಲ ೬೦ ಸಾವಿರ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿದ್ದು, ದಕ್ಷಿಣ ಕರ್ನಾಟಕ ಮಾದರಿಯಾಗಿರುವಾಗ ಉತ್ತರ ಕರ್ನಾಟಕ ಏಕೆ ಹಿಂದೆ ಬಿದ್ದಿದೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು. ಹಾಲು ಉತ್ಪಾದನೆ ಹೆಚ್ಚಾದರೆ ಕೃಷಿ, ಪಶುಸಂಗೋಪನೆ, ರೇಷ್ಮೆ ಸೇರಿದಂತೆ ಸಂಬAಧಿತ ಇಲಾಖೆಗಳೂ ಸಕ್ರಿಯಗೊಳ್ಳುತ್ತವೆ ಹಾಗೂ ಕುಟುಂಬದ ಆರ್ಥಿಕತೆಯ ಜೊತೆಗೆ ಸಾಮಾಜಿಕ ಆರ್ಥಿಕತೆಯೂ ಸದೃಢಗೊಳ್ಳುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಮೂರ್ತಿ ಗಾಯಕವಾಡ್ ಮಾತನಾಡಿ, “ಹಾಲು ಉತ್ಪಾದನೆಯಿಂದ ಆರ್ಥಿಕ ವೃದ್ಧಿ ಸಾಧಿಸಲು ಸಾಧ್ಯವಿದೆ. ನಾನೇ ಇದಕ್ಕೆ ಉತ್ತಮ ಉದಾಹರಣೆ. ರಾಜಕಾರಣಿಗಳ ಬೆನ್ನು ಬೀಳದೆ, ಯಾವುದೇ ಹೆಚ್ಚಿನ ವೆಚ್ಚಕ್ಕೆ ಒಳಗಾಗದೆ ಪಶುಸಂಗೋಪನೆ ಹಾಗೂ ಹೈನುಗಾರಿಕೆಯಲ್ಲಿ ಉತ್ತಮ ಲಾಭ ಗಳಿಸಬಹುದು” ಎಂದು ತಿಳಿಸಿದರು.
ಕಿಸಾನ್ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ಈ ಭಾಗದಲ್ಲಿ ಹಿಂದುಳಿದಿರುವ ಹೈನುಗಾರಿಕೆಗೆ ಉತ್ತೇಜನ ನೀಡಲು ಸರ್ಕಾರದಿಂದ ಸಹಾಯಧನ ಹಾಗೂ ಸಾಲ ಸೌಲಭ್ಯಗಳು ದೊರೆಯಬೇಕು, ರೈತರೂ ಸಹ ಹೈನುಗಾರಿಕೆ ಕೃಷಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಸ್ವಾವಲಂಬಿಗಳಾಗಲು ಸರ್ಕಾರ ಹಾಗೂ ಹಾಲು ಮಂಡಳಿಯ ಸಹಕಾರ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಪಶು ಸಂಗೋಪನ ಸಹಾಯಕ ಉಪನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಮಾತನಾಡಿ, ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಹರಿದಾಸ ಪಾಟೀಲ ಪಿಂಟು ತಮ್ಮ ಅನುಭವಗಳನ್ನು ಹಂಚಿಕೊAಡರು. ಗ್ರಾಮದ ವಿಶ್ವನಾಥ ಪಾಟೀಲ,ಕಮಲೇಶ ಅವುಟೆ, ಮಾದನ ಹಿಪ್ಪರಗಾ ಮಲ್ಲಿನಾಥ ಪರೇಣಿ, ಹೋರಾಟಗಾರ ಮಹಾಂತೇಶ ಸಣ್ಣಮನಿ, ಕೆಎಂಎಫ್ ಸಹಾಯಕ ವ್ಯವಸ್ಥಾಪಕ ಡಾ.ಚೇತನ್, ರಮೇಶ ಅವುಟೆ, ವೆಂಕಟ ಪೂಜಾರಿ,ಲಕ್ಷö್ಮಣ ಕಾಂಬಳೆ, ಡಾ. ಪ್ರಥ್ವಿರಾಜ ಅರಗಡೆ,ಡಾ. ಮಹೇಶ ಮಾನೆ ಕೆಎಂಎಪ್ ಕ್ಷೇತ್ರಾಧಿಕಾರಿ ಸುನಿತಾ ಸೇರಿದಂತೆ ಹೈನುಗಾರಿಕೆಯ ರೈತರು ಹಾಗೂ ಗಣ್ಯರು ಉಪಸ್ಥಿತರಿದ್ದರು. ರೈತ ಕಲ್ಯಾಣಿ ನಿರೂಪಿಸಿದರೆ, ಅಸ್ಪಾಕ್ ಮುಲ್ಲಾ ವಂದಿಸಿದರು.