ಆಳಂದ: ಸಿಯುಕೆಯಲ್ಲಿ ಹಮ್ಮಿಕೊಂಡ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ೧೨೫ನೇ ಜನ್ಮದಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಲೇಖಕ ಕೆ.ರಾಕ್ ಸುಧಾಕರ್ರಾವ್ ಮಾತನಾಡಿದರು. ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ, ಕುಲಸಚಿವಪ್ರೊ. ಆರ್.ಆರ್. ಬಿರಾದಾರ ಇದ್ದರು.
ಆಳಂದ: ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಶ್ರೇಷ್ಠ ಶಿಕ್ಷಣ ತಜ್ಞ, ಸಮರ್ಥ ಸಂಸದೀಯ ನಾಯಕ ಹಾಗೂ ರಾಷ್ಟ್ರ ಚಿಂತಕರಾಗಿದ್ದು, ದೇಶದ ಶಿಕ್ಷಣ, ಸಾಂವಿಧಾನಿಕ ಚಿಂತನೆ, ಕೈಗಾರಿಕಾ ಅಭಿವೃದ್ಧಿ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಅವರು ನೀಡಿದ ಕೊಡುಗೆಗಳು ಇಂದಿಗೂ ಪ್ರಸ್ತುತ ಹಾಗೂ ಪ್ರೇರಣಾದಾಯಕವಾಗಿವೆ ಎಂದು ಹೈದರಾಬಾದ್ನ ಹಿರಿಯ ಪತ್ರಕರ್ತ, ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ. ರಾಕ ಸುಧಾಕರ್ ರಾವ್ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ವತಿಯಿಂದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ೧೨೫ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ “ವಿಕಸಿತ ಭಾರತಕ್ಕಾಗಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೃಷ್ಟಿಕೋನ” ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಡಾ. ಮುಖರ್ಜಿ ೩೩ನೇ ವಯಸ್ಸಿನಲ್ಲೇ ಭಾರತದ ಅತ್ಯಂತ ಕಿರಿಯ ಉಪಕುಲಪತಿಗಳಾಗಿದ್ದರು. ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿಯೂ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅವರು ನಡೆಸಿದ ಹೋರಾಟ ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಜರಾಮರವಾಗಿದೆ ಎಂದು ಅವರು ಹೇಳಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ವಹಿಸಿದ ಪಾತ್ರ, ರಾಷ್ಟ್ರೀಯ ಏಕೀಕರಣಕ್ಕಾಗಿ ವಿಚಾರಗಳು, ಸ್ಥಳಾಂತರಗೊAಡ ಸಮುದಾಯಗಳ ಬಗ್ಗೆ ತೋರಿದ ಕಾಳಜಿ ಸಂವಿಧಾನಿಕ ಮೌಲ್ಯಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಹೊಂದಿದ್ದ ಬದ್ಧತೆ ಮಾದರಿಯಾಗಿದೆ ಎಂದು ತಿಳಿಸಿದರು.
ಜಮ್ಮು-ಕಾಶ್ಮೀರದ ಸಾಂವಿಧಾನಿಕ ಸ್ಥಾನಮಾನದ ಹಿನ್ನೆಲೆಯಲ್ಲಿ ಡಾ. ಮುಖರ್ಜಿ ಪ್ರತಿಪಾದಿಸಿದ್ದ “ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ಧ್ವಜ” ಎಂಬ ಘೋಷಣೆಯನ್ನು ಸ್ಮರಿಸಿದರು. ಸಂವಿಧಾನದ ೩೭೦ನೇ ವಿಧಿಯ ರದ್ದತಿಯನ್ನು ಅವರ ದೂರದೃಷ್ಟಿಯ ಸಾಕಾರವೆಂದು ಅನೇಕರು ಪರಿಗಣಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕುರಿತು ವಿಶ್ವವಿದ್ಯಾಲಯಗಳು ಪುರಾವೆ ಆಧಾರಿತ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದ ಅವರು, ಇಂತಹ ಅಧ್ಯಯನಗಳು ಭಾರತದ ಸ್ವಾತಂತ್ರ್ಯ ಹೋರಾಟ, ಸಂವಿಧಾನಿಕ ವಿಕಸನ ಹಾಗೂ ರಾಷ್ಟ್ರ ನಿರ್ಮಾಣದ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಆಳವಾದ ಅರಿವು ಮೂಡಿಸಲಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ರಾಷ್ಟ್ರೀಯ ನಾಯಕರ ಜೀವನ ಹಾಗೂ ಕೊಡುಗೆಗಳ ಕುರಿತು ಮಾಹಿತಿಯುಕ್ತ ಮತ್ತು ವಸ್ತುನಿಷ್ಠ ಶೈಕ್ಷಣಿಕ ಚರ್ಚೆಗಳನ್ನು ಉತ್ತೇಜಿಸುವ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ ಎಂದು ಹೇಳಿದರು.
ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೃಷ್ಟಿಕೋನವು ವಿಕಸಿತ ಭಾರತದ ಆಶಯಕ್ಕೆ ಪೂರಕವಾಗಿದೆ. ನವೀನ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ರಾಷ್ಟ್ರೀಯ ಸೇವೆಯ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಪ್ರೊ. ಚನ್ನವೀರ್ ಆರ್.ಎಂ. ಸ್ವಾಗತಿಸಿದರು. ಪ್ರೊ. ಬಸವರಾಜ್ ಎಂ. ಕುಬಕಡ್ಡಿ ವಂದಿಸಿದರು. ಡಾ. ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿದರು.