Shubhashaya News

ಸ್ಪೇನ್ ಸರ್ಕಾರದ ಪ್ರತಿಷ್ಠಿತ ‘ಹಿಸ್ಪಾನೆಕ್ಸ್’ ಸಂಶೋಧನಾ ಅನುದಾನಕ್ಕೆ ಸಿಯುಕೆಯ ಡಾ. ಪಿ. ಕುಮಾರ್ ಮಂಗಲ ಆಯ್ಕೆ

ಅಕ್ಕ ಮಹಾದೇವಿ ವಚನ ಸಾಹಿತ್ಯ–ಸ್ಪೇನ್‌ನ ಸಂತ ಕವಯತ್ರಿ ಸಾಂತಾ ತೆರೇಸಾ ಸಾಹಿತ್ಯದ ತುಲನಾತ್ಮಕ ಅಧ್ಯಯನಕ್ಕೆ ಅವಕಾಶ; ಭಾರತದಿಂದ ಆಯ್ಕೆಯಾದ ಕೇವಲ ಎರಡು ಯೋಜನೆಗಳಲ್ಲಿ ಒಂದಕ್ಕೆ ಮನ್ನಣೆ

ಆಳಂದ: ಕಡಗಂಚಿ ಬಳಿಯ ಸಿಯುಕೆ ಗತವೈಭವ ನೋಟ.

ಆಳಂದ: ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸ್ಪ್ಯಾನಿಷ್ ಭಾಷೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ. ಕುಮಾರ್ ಮಂಗಲ ಅವರಿಗೆ ೨೦೨೬–೨೭ನೇ ಶೈಕ್ಷಣಿಕ ವರ್ಷದ ಸ್ಪೇನ್ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ನೀಡಲಾಗುವ ಪ್ರತಿಷ್ಠಿತ ‘ಹಿಸ್ಪಾನೆಕ್ಸ್’ (ಊisಠಿಚಿಟಿex) ಅಂತರರಾಷ್ಟ್ರೀಯ ಸಂಶೋಧನಾ ಅನುದಾನ ಲಭಿಸಿದೆ.


ವಿಶ್ವದಾದ್ಯಂತ ಸ್ಪ್ಯಾನಿಷ್ ಭಾಷೆ, ಸಾಹಿತ್ಯ ಹಾಗೂ ಹಿಸ್ಪಾನಿಕ್ ಅಧ್ಯಯನಗಳನ್ನು ಉತ್ತೇಜಿಸುವ ಉದ್ದೇಶದಿಂದ ನೀಡಲಾಗುವ ಈ ಅನುದಾನ ಅತ್ಯಂತ ಪ್ರತಿಷ್ಠಿತ ಹಾಗೂ ತೀವ್ರ ಸ್ಪರ್ಧಾತ್ಮಕ ಸಂಶೋಧನಾ ಯೋಜನೆಗಳಲ್ಲಿ ಒಂದಾಗಿದೆ. ಈ ಬಾರಿ ವಿಶ್ವದ ವಿವಿಧ ದೇಶಗಳಿಂದ ಬಂದ ಅನೇಕ ಅರ್ಜಿಗಳ ಪೈಕಿ ಆಯ್ಕೆಯಾದ ಕೇವಲ ೧೫ ಸಂಶೋಧನಾ ಯೋಜನೆಗಳಲ್ಲಿ ಡಾ. ಕುಮಾರ್ ಮಂಗಲ ಅವರ ಯೋಜನೆಯೂ ಸ್ಥಾನ ಪಡೆದಿದ್ದು, ಭಾರತದಿಂದ ಆಯ್ಕೆಯಾದ ಕೇವಲ ಎರಡು ಯೋಜನೆಗಳಲ್ಲಿ ಇದೂ ಒಂದಾಗಿದೆ. ಈ ಸಾಧನೆಯು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಗರಿಮೆಯನ್ನು ತಂದುಕೊಟ್ಟಿದೆ.
ಡಾ. ಕುಮಾರ್ ಮಂಗಲ ಅವರ ಸಂಶೋಧನಾ ಯೋಜನೆಯಲ್ಲಿ ಕನ್ನಡದ ಪ್ರಥಮ ಮಹಿಳಾ ಕವಯತ್ರಿ, ೧೨ನೇ ಶತಮಾನದ ಶರಣೆ ಅಕ್ಕ ಮಹಾದೇವಿ ಸೇರಿದಂತೆ ಪ್ರಮುಖ ವಚನಕಾರರ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಮಧ್ಯಕಾಲೀನ ಸ್ಪೇನ್‌ನ ಪ್ರಸಿದ್ಧ ಸಂತ-ಕವಯತ್ರಿ ಸಾಂತಾ ತೆರೇಸಾ ಡಿ ಅವಿಲಾ ಅವರ ಸಾಹಿತ್ಯ ಮತ್ತು ಆಧ್ಯಾತ್ಮಿಕ ವಿಚಾರಗಳೊಂದಿಗೆ ತುಲನಾತ್ಮಕವಾಗಿ ಅಧ್ಯಯನ ಮಾಡಲಾಗುತ್ತದೆ. ಈ ಸಂಶೋಧನೆಯು ಭಾರತ ಮತ್ತು ಸ್ಪೇನ್ ದೇಶಗಳ ಸಾಹಿತ್ಯ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಪರಂಪರೆಗಳ ನಡುವೆ ಹೊಸ ಅಂತರಸಾAಸ್ಕೃತಿಕ ಸಂವಾದಕ್ಕೆ ದಾರಿ ಮಾಡಿಕೊಡುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ವಿದ್ವತ್ಪೂರ್ಣ ವಿನಿಮಯಕ್ಕೂ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷಿ ವಚನ ಸಾಹಿತ್ಯ ಭಾಷಾಂತರ ಯೋಜನೆಯ ಭಾಗವಾಗಿ ಡಾ. ಕುಮಾರ್ ಮಂಗಲ ಅವರು ಈಗಾಗಲೇ ಸುಮಾರು ೨,೫೦೦ ವಚನಗಳನ್ನು ಸ್ಪ್ಯಾನಿಷ್ ಭಾಷೆಗೆ ಅನುವಾದಿಸಿದ್ದು, ಕನ್ನಡ ಸಾಹಿತ್ಯವನ್ನು ಅಂತರರಾಷ್ಟ್ರೀಯ ಓದುಗರಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಇದೇ ಯೋಜನೆಯಲ್ಲಿ ಡಾ. ಪಿಯಾಲಿ ರಾಯ್ ಅವರು ಜಪಾನೀಸ್ ಹಾಗೂ ಶ್ರೀ ಶಿವಂ ಮಿಶ್ರಾ ಅವರು ಜರ್ಮನ್ ಭಾಷೆಗೆ ವಚನಗಳನ್ನು ಅನುವಾದಿಸುತ್ತಿದ್ದು, ಕರ್ನಾಟಕದ ಶ್ರೀಮಂತ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ವಿಶ್ವದ ವಿವಿಧ ಭಾಷೆಗಳ ಮೂಲಕ ಪರಿಚಯಿಸುವ ಕಾರ್ಯ ನಡೆಯುತ್ತಿದೆ.
ಈ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, “ಡಾ. ಕುಮಾರ್ ಮಂಗಲ ಅವರ ಸಾಧನೆ ವಿಶ್ವವಿದ್ಯಾಲಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಮತ್ತು ಮನ್ನಣೆ ತಂದುಕೊಟ್ಟಿದೆ. ಅವರ ಸಂಶೋಧನಾ ಕಾರ್ಯಗಳು ನಮ್ಮ ವಿಶ್ವವಿದ್ಯಾಲಯದ ಸಂಶೋಧನಾ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತಿದ್ದು, ಯುವ ಸಂಶೋಧಕರಿಗೆ ಪ್ರೇರಣೆಯಾಗಲಿವೆ” ಎಂದು ಅಭಿನಂದಿಸಿದ್ದಾರೆ.
ಅನುದಾನ ಲಭಿಸಿರುವ ಹಿನ್ನೆಲೆಯಲ್ಲಿ ಡಾ. ಪಿ. ಕುಮಾರ್ ಮಂಗಲ ಅವರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಅವರ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಮಾನವಿಕ ಮತ್ತು ಭಾಷಾ ವಿಭಾಗದ ಡೀನ್ ಪ್ರೊ. ವಿಕ್ರಮ್ ವಿಸಾಜಿ, ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಪಿ. ಡೋಣೂರ, ಬಸವ ಪೀಠದ ಸಂಯೋಜಕ ಡಾ. ಗಣಪತಿ ಸಿನ್ನೂರ್ ಹಾಗೂ ಬೆಂಗಳೂರಿನ ಬಸವ ಸಮಿತಿಯ ಶ್ರೀ ಅರವಿಂದ್ ಜತ್ತಿ ಅವರ ಮಾರ್ಗದರ್ಶನ ಮತ್ತು ಸಹಕಾರವನ್ನು ಸ್ಮರಿಸಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Leave A Reply

Your email address will not be published.