Shubhashaya News

1ನೇ ತರಗತಿ ಪ್ರವೇಶ ವಯಸ್ಸು ಸಡಿಲಿಕೆ ಪರಿಶೀಲಿಸಿ : ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್ ನಿರ್ದೇಶನ

ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮೂಡಿದ್ದ ಆತಂಕಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಒಂದನೇ ತರಗತಿ ಪ್ರವೇಶಾತಿಯ ವಯೋಮಿತಿ ಸಡಿಲಿಕೆ ಆದೇಶವನ್ನು ಮರು ಪರಿಶೀಲಿಸಿ, ಒಂದು ವಾರದೊಳಗೆ ಸೂಕ್ತವಾದ ಹೊಸ ಆದೇಶ ಹೊರಡಿಸುವಂತೆ ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಕಡಕ್ ಸೂಚನೆ ನೀಡಿದೆ.

ಬೆಂಗಳೂರಿನ ಮಾಸ್ಟರ್ ಕೃಷ್ಣಗಣೇಶ್ ಸೇರಿದಂತೆ ಆರು ಮಂದಿ ವಿದ್ಯಾರ್ಥಿಗಳು ಪೋಷಕರ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ ನಡೆಸಿತು. ಸದ್ಯ ಜಾರಿಯಲ್ಲಿರುವ ವಯೋಮಿತಿ ನಿಯಮದಿಂದಾಗಿ ರಾಜ್ಯಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ಗೊಂದಲ ಹಾಗೂ ತೊಂದರೆ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಆಯಾಮಗಳಲ್ಲೂ ಈ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಪೀಠವು ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಪ್ರಮುಖ ಅಂಶಗಳನ್ನು ಮನವರಿಕೆ ಮಾಡಿಕೊಟ್ಟರು. ಶಾಲಾ ಶಿಕ್ಷಣ ಇಲಾಖೆಯು ಹೊರಡಿಸಿರುವ ಆದೇಶದ ಪ್ರಕಾರ ಒಂದನೇ ತರಗತಿ ದಾಖಲಾತಿಗೆ ಮಗುವಿಗೆ 6 ವರ್ಷ ತುಂಬಿರಬೇಕು. ಆದರೆ, ಪ್ರಸ್ತುತ ಅರ್ಜಿದಾರರಾದ ಮಕ್ಕಳಿಗೆ ಇನ್ನೂ 6 ವರ್ಷ ಪೂರ್ಣಗೊಂಡಿಲ್ಲ. ಆದಾಗ್ಯೂ, ಅವರು ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು (ಯುಕೆಜಿ) ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸರ್ಕಾರದ ಈ ಕಠಿಣ ನಿಯಮದಿಂದಾಗಿ ರಾಜ್ಯದ ಸುಮಾರು 5 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದ್ದು, ಅವರು ಅನಿವಾರ್ಯವಾಗಿ ಮತ್ತೊಮ್ಮೆ ಯುಕೆಜಿ ತರಗತಿಯಲ್ಲೇ ಓದಬೇಕಾದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾದಿಸಿದರು.

ಈ ಹಿಂದೆ ಶಾಲಾ ಪ್ರವೇಶಕ್ಕೆ ಕನಿಷ್ಠ 6 ವರ್ಷ ನಿಗದಿಪಡಿಸಲಾಗಿದ್ದ ವಯೋಮಿತಿಯನ್ನು ತದನಂತರ 5 ವರ್ಷ 8 ತಿಂಗಳಿಗೆ ಸಡಿಲಿಸಿ ಇಳಿಸಲಾಗಿತ್ತು. ಆದರೆ, ಈಗಿರುವ ಪ್ರಾಯೋಗಿಕ ಸಮಸ್ಯೆಗಳನ್ನು ನಿವಾರಿಸಲು ಮತ್ತು ಮಕ್ಕಳ ಶೈಕ್ಷಣಿಕ ವರ್ಷ ವ್ಯರ್ಥವಾಗುವುದನ್ನು ತಪ್ಪಿಸಲು ಈ ವಯೋಮಿತಿಯನ್ನು 5 ವರ್ಷ 4 ತಿಂಗಳಿಗೆ ಇಳಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಅರ್ಜಿದಾರರ ವಾದ ಆಲಿಸಿದ ನಂತರ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರಕ್ಕೆ ಸೂಕ್ತ ಸಮಯ ನೀಡಿದಲ್ಲಿ ಅರ್ಜಿದಾರರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಹಾಗೂ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದಂತೆ ಅಗತ್ಯವಿರುವ ಸೂಕ್ತ ಆದೇಶವನ್ನು ಕಾನೂನು ಚೌಕಟ್ಟಿನಲ್ಲಿ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠವು, ವಾರದೊಳಗೆ ಅಂತಿಮ ನಿರ್ಧಾರ ಪ್ರಕಟಿಸಲು ಆದೇಶಿಸಿದೆ.

Leave A Reply

Your email address will not be published.