ಭಾರತೀಯ ಚುನಾವಣಾ ಆಯೋಗವು (ECI) ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (SIR) ಮೂರನೇ ಹಂತಕ್ಕೆ ಚಾಲನೆ ನೀಡಿದೆ. ಈ ಪಟ್ಟಿಯಲ್ಲಿ ಕರ್ನಾಟಕವೂ ಸೇರಿರುವುದು ವಿಶೇಷವಾಗಿದೆ.
ಏನಿದು SIR ಪ್ರಕ್ರಿಯೆ? ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಆಯೋಗವು ಈ ಅಭಿಯಾನವನ್ನು ಹಮ್ಮಿಕೊಂಡಿದೆ. ಮುಖ್ಯವಾಗಿ ನಕಲಿ ಮತದಾರರು (duplicate), ಮೃತಪಟ್ಟವರು ಮತ್ತು ಅರ್ಹರಲ್ಲದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿ, ಪಟ್ಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಇದರ ಉದ್ದೇಶವಾಗಿದೆ.
ಯಾವೆಲ್ಲಾ ರಾಜ್ಯಗಳಲ್ಲಿ ಜಾರಿ? ಕರ್ನಾಟಕದ ಜೊತೆಗೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಪಂಜಾಬ್, ಒಡಿಶಾ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಈ ಹಂತ ಜಾರಿಗೆ ಬರಲಿದೆ. ಈ ಹಂತ ಮುಗಿದ ನಂತರ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೊರತುಪಡಿಸಿ ಇಡೀ ದೇಶದ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡಂತಾಗುತ್ತದೆ.
ಪ್ರಮುಖ ಮುಖ್ಯಾಂಶಗಳು:
ಮನೆ-ಮನೆ ಭೇಟಿ: ಮೇ 30 ರಿಂದ ಅಕ್ಟೋಬರ್ 14 ರವರೆಗೆ ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಿ ಒಟ್ಟು 36.73 ಕೋಟಿ ಮತದಾರರ ಮಾಹಿತಿ ಪರಿಶೀಲಿಸಲಿದ್ದಾರೆ.
ಕರಡು ಪ್ರಕಟಣೆ: ಪರಿಷ್ಕೃತ ಮತದಾರರ ಪಟ್ಟಿಯ ಕರಡನ್ನು ಜುಲೈ 5 ರಿಂದ ಅಕ್ಟೋಬರ್ 21 ರ ಅವಧಿಯಲ್ಲಿ ಪ್ರಕಟಿಸಲಾಗುವುದು.
ರಾಜಕೀಯ ಪಕ್ಷಗಳ ಸಹಕಾರ: ಈ ಪ್ರಕ್ರಿಯೆಯು ಪಾರದರ್ಶಕವಾಗಿರಲು ಪ್ರತಿಯೊಂದು ಮತದಾನ ಕೇಂದ್ರಕ್ಕೆ ಬೂತ್ ಮಟ್ಟದ ಏಜೆಂಟ್‌ಗಳನ್ನು (BLA) ನೇಮಿಸುವಂತೆ ರಾಜಕೀಯ ಪಕ್ಷಗಳಿಗೆ ಆಯೋಗ ವಿನಂತಿಸಿದೆ.
ಬೋಗಸ್ ಮತದಾನಕ್ಕೆ ಬ್ರೇಕ್ ಹಾಕಲು ಮತ್ತು ಚುನಾವಣಾ ವ್ಯವಸ್ಥೆಯನ್ನು ಬಲಪಡಿಸಲು ಆಯೋಗವು ಬಿಹಾರದಿಂದ ಪ್ರಾರಂಭಿಸಿದ ಈ ‘ಸ್ವಚ್ಛತಾ ಅಭಿಯಾನ’ ಈಗ ಅಂತಿಮ ಹಂತಕ್ಕೆ ತಲುಪಿದೆ.
Recover your password.
A password will be e-mailed to you.
Comments are closed.