ದೇಶದ ಆರ್ಥಿಕ ಹಿತದೃಷ್ಟಿಯಿಂದ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ರಾಜ್ಯ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಈ ವಿನಂತಿಯನ್ನು ಪಾಲಿಸಲು ತಾವು ವೈಯಕ್ತಿಕವಾಗಿ ನಿರ್ಧರಿಸಿರುವುದಾಗಿ ತಿಳಿಸಿದರು.
ಅಶೋಕ್ ಅವರ ಪ್ರಮುಖ ನಿರ್ಧಾರಗಳು:
-
ಇಂಧನ ಉಳಿತಾಯ: ತಾವು ಬಳಸುವ ಕಾರುಗಳ ಪೆಟ್ರೋಲ್ ಮತ್ತು ಡೀಸೆಲ್ ಪ್ರಮಾಣವನ್ನು ಶೇ 30 ರಿಂದ 50ರಷ್ಟು ಕಡಿಮೆ ಮಾಡಲು ತೀರ್ಮಾನಿಸಿದ್ದಾರೆ.
-
ಬೆಂಗಾವಲು ವಾಹನ ಕಡಿತ: ಕೇವಲ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ‘ಎಸ್ಕಾರ್ಟ್’ ಅಥವಾ ಬೆಂಗಾವಲು ವಾಹನಗಳನ್ನು ಬಳಸುವುದಾಗಿ ಅವರು ಸ್ಪಷ್ಟಪಡಿಸಿದರು.
-
ಅಡುಗೆ ಎಣ್ಣೆ ಬಳಕೆ ಇಳಿಕೆ: ಮನೆಯಲ್ಲೂ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವಂತೆ ಕುಟುಂಬ ಸದಸ್ಯರಿಗೆ ಸೂಚಿಸಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇಶದ ಹಿತದೃಷ್ಟಿಯಿಂದ ಕ್ರಮ
“ಯುದ್ಧದ ಕಾರಣದಿಂದ ಇಂದು ಇಡೀ ಪ್ರಪಂಚವೇ ಸಂಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕಡಿಮೆ ಬಳಕೆ ಮತ್ತು ಚಿನ್ನದ ಖರೀದಿ ಮಾಡದಿರುವ ಬಗ್ಗೆ ಪ್ರಧಾನಿಗಳು ವಿನಂತಿಸಿದ್ದಾರೆ. ಇದಕ್ಕೆ ಸಾರ್ವಜನಿಕರೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ” ಎಂದು ಅಶೋಕ್ ಹೇಳಿದರು.
ಕೇಂದ್ರದ ಸಚಿವರು ಮತ್ತು ಉನ್ನತ ಅಧಿಕಾರಿಗಳು ಈಗಾಗಲೇ ಪ್ರಧಾನಿಯವರ ಕರೆಗೆ ಓಗೊಟ್ಟು, ಮೆಟ್ರೋದಂತಹ ಸಾಮೂಹಿಕ ಸಾರಿಗೆ ವ್ಯವಸ್ಥೆ (Public Transport) ಬಳಸಲು ಮುಂದಾಗಿದ್ದಾರೆ. ಇದೇ ಹಾದಿಯಲ್ಲಿ ನಾವು ಕೂಡ ಸಾಗುತ್ತಿದ್ದೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
Comments are closed.