ಒಳ ಮೀಸಲು ಬಿಕ್ಕಟ್ಟು ಬಗೆಹರಿದಿರುವಂತೆ 56,432 ಹುದ್ದೆ ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಉದ್ಯೋಗಾಕಾಂಕ್ಷಿಗಳು ನೇಮಕ ಪ್ರಕ್ರಿಯೆಗಾಗಿ ತುದಿಗಾಲಲ್ಲಿ ಕಾದಿದ್ದಾರೆ. ಅಂದಹಾಗೆ ಸರ್ಕಾರದ ಅಂಶಗಳ ಪ್ರಕಾರ ಸರ್ಕಾರದ ಇಲಾಖೆಗಳಲ್ಲಿ 2,84,881 ಖಾಲಿ ಹುದ್ದೆಗಳಿವೆ. ಈ ಪೈಕಿ 56,432 ಹುದ್ದೆಗಳನ್ನು ತುಂಬವ ಪ್ರಕ್ರಿಯೆ ನಡೆಸಲು ಪ್ರಾಧಿಕಾರಗಳಿಗೆ ಈಗಾಗಲೇ ಸೂಚನೆ ನೀಡಲಾಗಿತ್ತು. ಇದೀಗ ಮರು ಅನುಮತಿ ನೀಡಲಾಗುತ್ತದೆ.
ಈ 56,432 ಹುದ್ದೆಗಳಲ್ಲಿ, ಸುಮಾರು 32,132 ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದ (ಹೈದರಾಬಾದ್ ಕರ್ನಾಟಕ) ಸ್ಥಳೀಯ ಮೀಸಲಾತಿ ವ್ಯಾಪ್ತಿಗೆ ಬರುತ್ತವೆ. ಉಳಿದವು ರಾಜ್ಯಮಟ್ಟದ ಸಾಮಾನ್ಯ ಹುದ್ದೆಗಳಾಗಿವೆ. ಹೈ-ಕಾ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯಿಂದ ಪುನಃ ಅನುಮತಿ ಪಡೆಯಬೇಕಾಗಿಲ್ಲ. ಪರಿಭಾವಿತ ಎಂದೇ ಪರಿಗಣನೆಯಾಗುತ್ತದೆ.
ಇನ್ನು ರಾಜ್ಯ ಮಟ್ಟದ ಹುದ್ದೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಅನುಮೋದನೆ ನೀಡುವಾಗ, ಆಯಾ ಇಲಾಖೆಗಳಿಗೆ ಆರ್ಥಿಕ ವರ್ಷದ ಬಜೆಟ್ ಮಿತಿಯೊಳಗೆ ವೇತನ ಭರಿಸಲು ಸಾಧ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಹಂತ ಹಂತವಾಗಿ ಭರ್ತಿ ಮಾಡಲು ಸೂಚನೆ ನೀಡಿದೆ. ಜತೆಗೆ ಅಯಾ ನೇಮಕ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ ಐದು ವರ್ಷ ಸಡಿಲಿಕೆ ನೀಡಿ ಆದೇಶಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಇಲಾಖೆಗಳು ನೇಮಕ ಪ್ರಸ್ತಾವನೆ ಸಲ್ಲಿಸಲಿದ್ದು, ಬಳಿಕ ಸಾಮಾನ್ಯ ಹುದ್ದೆಗಳಿಗೆ ಒಂದೇ ಬಾರಿಗೆ ಪ್ರವೇಶ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ನಿನ್ನೆ ಒಳ ಮೀಸಲಾತಿ ವಿಚಾರಿಸಿ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ ನಡೆಯಿತು. ಬಳಿಕ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿತು.
Comments are closed.