Shubhashaya News

BREAKING : ವಿವಿಗಳಲ್ಲಿ ಜಾತಿ ತಾರತಮ್ಯ ತಡೆಗೆ, ಕರ್ನಾಟಕ ರೋಹಿತ್ ವೇಮುಲಾ ಮಸೂದೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ

ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯುವ ಕರ್ನಾಟಕ ರೋಹಿತ್ ವೇಮುಲಾ ಮಸೂದೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಹುಚರ್ಚಿತ ಮಸೂದೆಗೆ ಅಸ್ತು ನೀಡಲಾಗಿದೆ.

ಮುಂದಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡನೆ ಮಾಡಲಾಗುವುದು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳು/ವಿಶ್ವವಿದ್ಯಾಲಯಗಳು) ಜಾತಿ ಆಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ಈ ಮಸೂದೆಯನ್ನು ರೂಪಿಸಲಾಗಿದೆ.

ಈ ಮಸೂದೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯ ನಡೆದರೆ ಸಂತ್ರಸ್ತ, ಸಂತ್ರಸ್ತನ ಪೋಷಕರು, ಸಹೋದರ, ಸಹೋದರಿ ಅಥವಾ ಆತನ ರಕ್ತ ಸಂಬಂಧಿ, ಮದುವೆ, ದತ್ತು ಅಥವಾ ಯಾವುದಾದರೂ ರೀತಿಯಲ್ಲಿ ಸಂಬಂಧ ಹೊಂದಿರುವ ಸಹೋದ್ಯೋಗಿ ದೂರು ನೀಡಲು ಅವಕಾಶ ಇರಲಿದೆ.

ಸಂಪುಟ ಸಭೆಯಲ್ಲಿ ಮಸೂದೆಯಲ್ಲಿ ಶಿಕ್ಷೆ ಪ್ರಮಾಣದಲ್ಲಿ ಕೆಲ ಸಣ್ಣ ಮಾರ್ಪಾಡುಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಎಸ್​ಸಿ, ಎಸ್​​ಟಿ ವಿದ್ಯಾರ್ಥಿಗಳ ಮೇಲೆ ಒಟ್ಟು 30 ವಿವಿಧ ರೀತಿಯ ದೌರ್ಜನ್ಯ ಎಸಗುವುದನ್ನು ಪಟ್ಟಿ ಮಾಡಲಾಗಿದೆ. ದಾಖಲಾತಿ ನಿರಾಕರಿಸುವುದು, ಸೌಲಭ್ಯ ನಿರಾಕರಣೆ, ಹಣಕಾಸು ಒತ್ತಡ ಹೇರುವುದು, ಜಾತಿ ನಿಂದನೆ ಮುಂತಾದವುಗಳು ದೌರ್ಜನ್ಯದ ಪರಿವ್ಯಾಪ್ತಿಗೆ ಬರಲಿದೆ.‌

ಪ್ರತಿ ಉನ್ನತ ಶಿಕ್ಷಣ ಸಂಸ್ಥೆ (HEI) ಕನಿಷ್ಠ 80 ಪ್ರತಿಶತ ಸದಸ್ಯರು SC/ST ಸಮುದಾಯಗಳಿಂದ ಕೂಡಿದ ಸಮಾನತೆಯ ಸಮಿತಿಯನ್ನು ರಚಿಸಬೇಕು‌. ಈ ಸಮಿತಿಯು ವಿಚಾರಣೆಯ 10 ದಿನಗಳಲ್ಲಿ HEIಗೆ ತನ್ನ ವರದಿಯನ್ನು ಸಲ್ಲಿಸಬೇಕು ಮತ್ತು ಈ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ HEIಗೆ ಗರಿಷ್ಠ 10 ಲಕ್ಷ ರೂ.ಗಳ ದಂಡವನ್ನು ವಿಧಿಸಬಹುದಾಗಿದೆ.

Comments are closed.

Don`t copy text!