Shubhashaya News

ಮಕ್ಕಳಿಗೆ ಮೊಬೈಲ್ ಕೊಡಿ! ಆದರೆ…

ಸುಮ್ಮನೇ ಕೊಡುವುದಲ್ಲ, ಸರಿಯಾದ ದಾರಿತೋರಿಸಿ ಕೊಡಿ. “ಮಕ್ಕಳಿಗೆ ಮೊಬೈಲ್ ಕೊಡಿ” ಎಂದು ಹೇಳಿದರೆ ಹಲವರಿಗೆ ಇದು ವಿಚಿತ್ರ ಸಲಹೆಯಂತೆ ಅನಿಸಬಹುದು. ಆದರೆ ನಾವು ಇಂದು ಬಂದು ನಿಂತಿರುವುದು ತೀವ್ರ ಪರಿವರ್ತನೆಯ ಸಂಕ್ರಮಣದ ಯುಗದಲ್ಲಿ! ತಂತ್ರಜ್ಞಾನದ ಅಲೆ ಇಡೀ ಜಗತ್ತನ್ನೇ ಆವರಿಸಿಕೊಂಡಿದೆ. ಬಯೋಟೆಕ್ನಾಲಜಿ, ನ್ಯಾನೋಟೆಕ್ನಾಲಜಿ, ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್—ಇವು ನಾಳೆಯ ಕಲ್ಪನೆಯಲ್ಲ; ಇಂದಿನ ಸ್ಪಷ್ಟ ವಾಸ್ತವಗಳು. ಇದೇ ವಾಸ್ತವಿಕೆಯಲ್ಲಿ ನಮ್ಮ ಮಕ್ಕಳು ಕಲಿಯಬೇಕು, ಬೆಳೆಯಬೇಕು ಮತ್ತು ಸ್ಪರ್ಧಿಸಬೇಕು. ಇಂತಹ ಸಂದರ್ಭದಲ್ಲಿ “ಮೊಬೈಲ್ ಬೇಡ” ಎನ್ನುವುದು ಈಗ ಜ್ಞಾನ ವಿರೋಧಿ ಆಲೋಚನೆ. ಒಂದರ್ಥದಲ್ಲಿ ಅಕ್ಷರ ವೈರಿ ಆಗಿದ್ದಂತೆ ಸಹ.

 

ಮೊಬೈಲ್ ಕೇವಲ ಆಟಿಕೆ ಅಲ್ಲ; ಅದು ಗ್ಯಾಜೆಟ್ + ಪುಸ್ತಕ + ಉಪನ್ಯಾಸಕ + ಪ್ರಯೋಗಾಲಯ + ಮನರಂಜನಾ ಸಾಧನ +++

ಎಲ್ಲವೂ ಒಂದೇ ಪರದೆಯಲ್ಲಿ ಸೇರಿದ ಚಿಕ್ಕ ಜಗತ್ತು. ಮನೆಯಲ್ಲೇ ಕುಳಿತು ವಿಶ್ವವನ್ನು ಪರಿಚಯಿಸುವ ತಿಳಿಯುವ ಸಾಮರ್ಥ್ಯ ಅದಕ್ಕಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ‘ಅಂಗೈಯಲ್ಲಿ ಅರಿವಿನ ಅರಮನೆ ಇದ್ದಂತೆ’.

 

ಆದರೆ ಮುಖ್ಯವಾದ ಪ್ರಶ್ನೆ: ಮೊಬೈಲ್ ಕೊಡುವ ವಿಧಾನ!? ಮಕ್ಕಳು ಕೇಳುವವರೆಗೆ ಕಾಯದೆ, ಪೋಷಕರೇ ಜವಾಬ್ದಾರಿಯುತವಾಗಿ ಮೊಬೈಲ್ ಅವರನ್ನು ತಾವಾಗಿಯೇ ಸ್ವಯಂ ಪ್ರೇರಣೆಯಿಂದ ಕೊಡಬೇಕು. ದಿನಕ್ಕೆ 20–20–20 ನಿಮಿಷಗಳ ಮೂರು ಸಮಯಸ್ಲಾಟ್‌ಗಳು ಸಾಕು. ಇಂತಹ ನಿಯಮಿತ ಉಪಯೋಗವು ಮಕ್ಕಳಲ್ಲಿ ಸಂಯಮ ಬೆಳೆಸುವುದಷ್ಟೇ ಅಲ್ಲ, ಬಳಕೆಯ ಉದ್ದೇಶವನ್ನೂ ಸ್ಪಷ್ಟಗೊಳಿಸುತ್ತದೆ.

ಮೊಬೈಲ್ ಬಳಸುವಾಗ ಮಕ್ಕಳು ಒಬ್ಬರೇ ಇರಬಾರದು. ಪೋಷಕರು ಅವರ ಬಳಿಯಲ್ಲಿ ಕುಳಿತು ಅವರು ಏನು ನೋಡುವರು, ಏನು ಆಡುತ್ತಿರುವರು ಎಂಬುದನ್ನು ಗಮನಿಸುವುದು ಅಗತ್ಯ. ತಪ್ಪು ಕಂಡರೂ ಸಿಟ್ಟು, ಬೈಯ್ಯುವುದು, ಟೀಕಿಸುವುದು, ಅಥವಾ ಹೊಡೆಯುವುದು — ಯಾವುದನ್ನೂ ಮಾಡದೇ ಮೃದುವಾಗಿ, ವಿವೇಕಪೂರ್ಣವಾಗಿ ದಾರಿ ತೋರಿಸಬೇಕು. ಇಂತಹ ಮೃದು ಮತ್ತು ಕಾರ್ಯಸಾಧು ಕ್ರಮವೇ ಮಕ್ಕಳು ಒಳ್ಳೆಯ  ತಿರುಗುವ ದಾರಿ.

 

ಮೊಬೈಲ್ ಅನ್ನು “ಕಳ್ಳನ ಕೈಯಲ್ಲಿ ಕೀಲಿ ಕೊಟ್ಟಂತೆ” ಕೊಡಬಾರದು. ಬದಲಾಗಿ, “ಸುರಕ್ಷಿತ ಬಳಕೆಯ ಕೀಲಿ” ಮಕ್ಕಳ ಕೈಗೆ ನೀಡಬೇಕು. ಅವರಿಗೆ ಏನು ಬೇಕು, ಎಷ್ಟು ಬೇಕು, ಯಾವ ಸಂದರ್ಭದಲ್ಲಿ ಬೇಕು ಎಂಬ ಅರಿವು ಪೋಷಕರಲ್ಲಿರಬೇಕು. ಮಕ್ಕಳ ವಯೋಮಾನದ ಪರಿಕಲ್ಪನೆ ಇರಬೇಕು. ತಾವು ಆ ವಯಸ್ಸಿನ ಛಲ, ಆಸೆ, ನಿರಾಶೆ, ಸಂಕಟ, ತವಕ – ತಲ್ಲಣ, ತಾಕಲಾಟಗಳನ್ನು ಅನುಭವಿಸಿದ್ದನ್ನು ಒಂದು ಕ್ಷಣ ಆತ್ಮಾವಲೋಕನ ಮಾಡಿಕೊಳ್ಳಬೇಕು.

ವಿಶೇಷವಾಗಿ ಹದಿಹರೆಯದವರ ವಿಷಯದಲ್ಲಿ ಇನ್ನೂ ಹೆಚ್ಚು ಸೂಕ್ಷ್ಮರಾಗಿರ ಬೇಕು. ಸಿಟ್ಟಿನಭರದಲ್ಲಿ ಕೈಗೊಳ್ಳುವ ಕೆಲವು ಪಾಲಕರ ನಿರ್ಧಾರಗಳು ತಮಗೆ ಮುಳುವಾಗಬಹುದು.

 

ಇಂದಿನ ಮಕ್ಕಳು ಡಿಜಿಟಲ್ ಜಗತ್ತಿನ ಮಕ್ಕಳು — Digital Natives. ಅವರ ಭವಿಷ್ಯದ ಶಿಕ್ಷಣ, ಉದ್ಯೋಗ, ಸಂವಹನ, ಕೌಶಲ್ಯ—all tech-based. ತಂತ್ರಜ್ಞಾನವನ್ನು ತಡೆದು ಮಕ್ಕಳನ್ನು ರಕ್ಷಿಸಲು ಸಾಧ್ಯವಿಲ್ಲ; ಆದರೆ ಸರಿಯಾದ ಬಳಕೆಯನ್ನು ಕಲಿಸಿ ಅವರನ್ನು ರೂಪಿಸುವುದು ಪೋಷಕರ ಕೈಯಲ್ಲಿರುವ ಅಪಾರ ಜವಾಬ್ದಾರಿ.

ಹೀಗಾಗಿ, ಮೊಬೈಲ್ ಕೊಡಿ—

ಆದರೆ ಜವಾಬ್ದಾರಿಯೊಂದಿಗೆ, ಪ್ರೀತಿಯೊಂದಿಗೆ, ಬಾಳಿನ ಮಾರ್ಗದರ್ಶನದೊಂದಿಗೆ.

ಮಕ್ಕಳ ಕೈಯಲ್ಲಿ ಮೊಬೈಲ್ ಅವರ ಭವಿಷ್ಯದ ಬಾಗಿಲು;

ಆ ಭವಿಷ್ಯದ ನಕ್ಷೆ ಪೋಷಕರ ಕೈಯಲ್ಲಿರಲಿ.

 

ಇದರೊಂದಿಗೆ ಮಕ್ಕಳಿಗೆ

ಮುದ್ರಣ ರೂಪದ ಪಠ್ಯೇತರ ಪುಸ್ತಕಗಳನ್ನು  ಓದುವ ರೂಢಿಯನ್ನೂ ಸಹ ಹಾಕಬೇಕು. ಪುಸ್ತಕ ಮತ್ತು ಮೊಬೈಲ್ ನಮಗೆ ಎರಡು ಕಣ್ಣುಗಳಿದ್ದಂತೆ. ಎರಡೂ ಮುಖ್ಯವೇ!!

–ಎಸ್. ಎಸ್. ಹಿರೇಮಠ

ಕಲಬುರಗಿ

ಮೊಬೈಲ್:

೯೩೪೨೩೫೬೨೨೨

Comments are closed.

Don`t copy text!