Shubhashaya News

ಬೆಳೆ ಹಾನಿ ಪರಿಹಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

ಆಳಂದ: ಜಿಲ್ಲೆಯಲ್ಲಿ ಸತತ ಮಳೆಯಿಂದ ತೊಗರಿ ಬೆಳೆ ಹಾಗೂ ರಾಶಿಗೆ ಬಂದಿದ್ದ ಉದ್ದು, ಹೆಸರು ಬೆಳೆಗೆ ತೀವ್ರ ಹಾನಿಯಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಕೂಡಲೇ ರಾಜ್ಯ ಸರ್ಕಾರ ತಕ್ಷಣವೇ ಬೆಳೆ ನಷ್ಟದ ಪರಿಹಾರವನ್ನು ಒದಗಿಸಿ, ಮುಂದಿನ ಹಂಗಾಮಿನ ಬಿತ್ತನೆಗೆ ಅನುಕೂಲ ಕಲ್ಪಿಸಬೇಕೆಂದು ನವ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದರಾಮ ಪಾಟೀಲ್ ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ಇದರಿಂದ ತೊಗರಿ, ಉದ್ದು ಹೆಸರು ಸೇರಿದಂತೆ ಪ್ರಮುಖ ಬೆಳೆಗಳು ನೀರುಗುಂಡಿಯಾಗಿ ಹಾಳಾಗಿವೆ. ಈ ತಾಲೂಕಿನ ರೈತರು ತಮ್ಮ ಜೀವನಾಧಾರವಾಗಿರುವ ಕೃಷಿಯನ್ನು ಮುಂದುವರಿಸಲು ಕಷ್ಟಪಡುತ್ತಿದ್ದಾರೆ. ಬೆಳೆ ನಷ್ಟದಿಂದಾಗಿ ಬ್ಯಾಂಕ್ ಸಾಲದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. “ನಮ್ಮ ಬೆಳೆಗಳು ನಾಶವಾಗಿವೆ, ಕೃಷಿಗೆ ತಗುಲಿರುವ ಸಾಲದ ಹೊರೆ ತಾಳಲಾರದಷ್ಟು ಭಾರವಾಗಿದೆ. ಸರ್ಕಾರ ಈಗಲೇ ಕ್ರಮ ಕೈಗೊಂಡು ಪರಿಹಾರ ನೀಡದಿದ್ದರೆ, ರೈತರು ಮುಂದಿನ ಬಿತ್ತನೆಗೆ ಹೇಗೆ ಸಿದ್ಧರಾಗಬೇಕು ಎಂದು ಸಿದ್ದರಾಮ ಪಾಟೀಲ್ ಪ್ರಶ್ನಿಸಿದ್ದಾರೆ.
ತಾಲೂಕಿನ ರೈತರು ಕೇವಲ ಬೆಳೆ ನಷ್ಟವನ್ನμÉ್ಟೀ ಎದುರಿಸುತ್ತಿಲ್ಲ, ಆರ್ಥಿಕ ಸಂಕಷ್ಟದಿಂದ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣವೇ ಬೆಳೆ ಪರಿಹಾರ ಬೆಳೆ ವಿಮೆಯ ಮೂಲಕ ಸೂಕ್ತ ಪರಿಹಾರ ನೀಡಬೇಕು ಮತ್ತು ಮುಂದಿನ ಹಂಗಾಮಿನ ಬಿತ್ತನೆಗೆ ಬೀಜ, ಗೊಬ್ಬರ ಮತ್ತು ಆರ್ಥಿಕ ಸಹಾಯವನ್ನು ಒದಗಿಸಬೇಕು” ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ಇತರ ಮುಖಂಡರೂ ಈ ಬೇಡಿಕೆಗೆ ಬೆಂಬಲ ಸೂಚಿಸಿದ್ದು, ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ರಾಜ್ಯಾದ್ಯಂತ ರೈತರು ತೀವ್ರ ಹೋರಾಟಕ್ಕಿಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. “ಕೃಷಿಯೇ ರಾಜ್ಯದ ಆರ್ಥಿಕತೆಯ ಬೆನ್ನೆಲುಬು. ಆದರೆ, ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ಇದು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ದೊಡ್ಡ ತೊಡಕಾಗಲಿದೆ” ಎಂದು ಸಂಘದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳೆ ನಷ್ಟದ ಸಮೀಕ್ಷೆಯನ್ನು ಶೀಘ್ರವಾಗಿ ನಡೆಸಿ, ವೈಜ್ಞಾನಿಕ ರೀತಿಯಲ್ಲಿ ಪರಿಹಾರವನ್ನು ಘೋಷಿಸುವಂತೆ ಕೋರಿದ್ದಾರೆ. ಜೊತೆಗೆ, ರೈತರಿಗೆ ಕೃಷಿ ಋಣ ಮನ್ನಾ, ಕಡಿಮೆ ಬಡ್ಡಿಯಲ್ಲಿ ಹೊಸ ಋಣ ಸೌಲಭ್ಯ, ಮತ್ತು ಉಚಿತ ಬೀಜ-ಗೊಬ್ಬರ ವಿತರಣೆಯಂತಹ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ, ತಾಲೂಕಿನ ರೈತರ ಸಂಕಷ್ಟವನ್ನು ತೀವ್ರವಾಗಿ ಪರಿಗಣಿಸಿ, ತಕ್ಷಣದ ಕ್ರಮಕ್ಕೆ ಒತ್ತಡ ಹೇರಲು ಕರ್ನಾಟಕ ರಾಜ್ಯ ರೈತ ಸಂಘ ಸಂಪೂರ್ಣ ಸಿದ್ಧತೆಯಲ್ಲಿದೆ ಎಂದು ಸಿದ್ದರಾಮ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭಧಲ್ಲಿ ತಾಲೂಕು ಅಧ್ಯಕ್ಷ ಬಸಲಿಂಗಪ್ಪ ಮುದ್ದಾಣಿ, ಮುಖಂಡ ಮಲ್ಲಿನಾಥ ವಡೆಯರ ನಿಂಬರಗಾ ಇತರರು ಉಪಸ್ಥಿತರಿದ್ದರು.

Comments are closed.

Don`t copy text!