ಆಳಂದ: ಪಟ್ಟಣದ ತಾಪಂ ಕಚೇರಿಗೆ ಭೇಟಿ ನೀಡಿದ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಅವರು ಇಒ ಮಾನಪ್ಪ ಕಟ್ಟಿಮನಿಯೊಂದಿಗೆ ಹಸಿರು ಪಥ ಕಾರ್ಯಕ್ರಮ ಸಿದ್ಧತೆ ಕುರಿತು ಚರ್ಚಿಸಿದರು.
ಆಳಂದ: ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಅರಣ್ಯ ಕೃಷಿಗೆ ಒತ್ತು ನೀಡುವ ಜನಜಾಗೃತಿ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಪಾಟೀಲ್ ಧಂಗಾಪೂರ ಅವರು ಸಲಹೆ ನೀಡಿದರು.
ಪಟ್ಟಣದ ತಾಲೂಕ ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪಕಟ್ಟಿ ಅವರನ್ನು ಭೇಟಿಯಾಗಿ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಮತ್ತು ತೋಟಗಾರಿಕೆ ಇಲಾಖೆಗಳ ಸಹಭಾಗಿತ್ವದಲ್ಲಿ ಈ ಆಂದೋಲನವನ್ನು ಯಶಸ್ವಿಗೊಳಿಸಲು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ, ಮತ್ತು ಉಸ್ತಯವಾರಿ ಸಚಿವರೊಂದಿಗೆ ಈ ವಿಷಯದ ಕುರಿತು ಚರ್ಚಿಸಿದ್ದು, ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ತಿಳಿಸಿದರು.
ರೈತರ ಹೊಲಬದುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಿಡಮರಗಳನ್ನು ನೆಡುವ ಮೂಲಕ ಅರಣ್ಯ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಪಂಚಾಯತ್ ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಿ, ಉದ್ಯೋಗ ಖಾತ್ರಿ ಯೋಜನೆಯಡಿ ಗಿಡನೆಡುವಿಕೆಯನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೃಷಿಕ ಸಮಾಜವು ಜಿಲ್ಲೆಯಲ್ಲಿ ಅರಣ್ಯ ಕೃಷಿಗಾಗಿ ವಿಶೇಷ ತಂಡವನ್ನು ರಚಿಸಿದ್ದು, ರೈತರ ಹೊಲಬದುಗಳಲ್ಲಿ ಗಿಡನೆಡುವಿಕೆಗೆ ಒತ್ತು ನೀಡಲಿದೆ. “ರೈತರು ಗಿಡನೆಡಲು ಮುಂದೆ ಬರುತ್ತಿಲ್ಲ ಎಂಬುದು ಕುಂಟು ನೆಪವಾಗಿದ್ದು, ಇದನ್ನು ಬದಲಾಯಿಸಲು ಜಾಗೃತಿ ಅಗತ್ಯ” ಎಂದು ಪಾಟೀಲ್ ಹೇಳಿದರು.
ಬೆಳೆ ವಿಮೆಯ ಒತ್ತಾಯ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. “ಬೆಳೆ ಹಾನಿಯ ವಿಮೆ ವಿತರಣೆಯನ್ನು ವಲಯವಾರು ಪರಿಗಣಿಸುವ ಬದಲು, ತಲಾ ರೈತನ ವೈಯಕ್ತಿಕ ಬೆಳೆ ಹಾನಿಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿ ವಿಮೆ ವಿತರಿಸಬೇಕು” ಎಂದು ಒತ್ತಾಯಿಸಿದರು.
ಸರ್ಕಾರಿ ಯೋಜನೆಗಳ ಸಮರ್ಪಕ ಅನುμÁ್ಠನ: ಕೃಷಿ ಉತ್ತೇಜನಕ್ಕಾಗಿ ಸರ್ಕಾರಿ ಯೋಜನೆಗಳನ್ನು ಇಲಾಖೆಗಳ ಸಹಭಾಗಿತ್ವದೊಂದಿಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಪಾಟೀಲ್ ತಾಲೂಕ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿಕ ಸಮಾಜದ ತಂಡವು ಈ ಯೋಜನೆಗಳ ಕಾರ್ಯರೂಪಕ್ಕೆ ಸಲಹೆ-ಸೂಚನೆಗಳನ್ನು ನೀಡಿ, ಅನುμÁ್ಠನಕ್ಕೆ ಕೋರಿದೆ.
ಈ ಜನಜಾಗೃತಿ ಆಂದೋಲನವು ಜಿಲ್ಲೆಯಲ್ಲಿ ಹಸಿರು ಕ್ರಾಂತಿಗೆ ಚಾಲನೆ ನೀಡುವ ಗುರಿಯನ್ನು ಹೊಂದಿದ್ದು, ರೈತರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಲಿದೆ ಎಂದು ಸಿದ್ದರಾಮಪ್ಪ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಸ್ಥಳದಲ್ಲೇ ದೂರವಾಣಿ ಮೂಲಕ ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಹಸಿರು ಪಥ ನಿರ್ಮಾಣ ಕಾರ್ಯಕ್ಕೆ ಸಹಕರಿಸಿ ಕೃಷಿಕ ಸಮಾಜದ ಬೆಂಬಲದೊಂದಿಗೆ ಅರಣ್ಯ ಕೃಷಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದ ಅವರು, ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದು ಅರಣ್ಯ ಕೃಷಿ ಕೈಗೊಳ್ಳಲು ರೈತರ ಮುಂದೆ ಬರಲಿ ಅದಕ್ಕೆ ಸಹಕರಿಸಲಾಗುವುದು ಎಂದು ಅವರು ಪಾಟೀಲರಿಗೆ ಹೇಳಿದರು.
Comments are closed.