Shubhashaya News

ಅನ್ನಭಾಗ್ಯ ಯೋಜನೆಗೆ ತಾಂತ್ರಿಕ ಗ್ರಹಣ: ಪಡಿತರ ಅಕ್ಕಿಗಾಗಿ ರಾಜ್ಯಾದ್ಯಂತ ಫಲಾನುಭವಿಗಳ ಪರದಾಟ!

ತಾಂತ್ರಿಕ ದೋಷ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆಗೆ ತೀವ್ರ ಅಡಚಣೆಯಾಗಿದ್ದು, ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಜನರು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರವು ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ಪಡಿತರ ವಿತರಿಸಲು ಸೂಚನೆ ನೀಡಿದ್ದರೂ, ಸರ್ವರ್ ಕೈಕೊಡುತ್ತಿರುವುದರಿಂದ ಈ ವ್ಯವಸ್ಥೆ ಸರಿಯಾಗಿ ಜಾರಿಯಾಗುತ್ತಿಲ್ಲ. ಪರಿಣಾಮವಾಗಿ, ಅನೇಕ ಕಡೆಗಳಲ್ಲಿ ರೇಷನ್ ವಿತರಣೆ ವಿಳಂಬವಾಗುತ್ತಿದ್ದರೆ, ಇನ್ನು ಕೆಲವೆಡೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದಲೂ ಈ ತಾಂತ್ರಿಕ ಸಮಸ್ಯೆ ಮುಂದುವರಿದಿದೆ. ಅತ್ತ ಸಕಲೇಶಪುರ ತಾಲೂಕಿನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ; ಜನರು ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಮುಂಜಾನೆ 4 ಗಂಟೆಯಿಂದಲೇ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾದು ನಿಂತರೂ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಸಿಗದೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ದಡದಹಳ್ಳಿಯಲ್ಲೂ ಇದೇ ವಾತಾವರಣವಿದ್ದು, ಸಾರ್ವಜನಿಕರು ತಮ್ಮ ದೈನಂದಿನ ಆಹಾರದ ಅಗತ್ಯಗಳಿಗಾಗಿ ಕಾಯುವ ಅನಿವಾರ್ಯತೆ ಎದುರಾಗಿದೆ.

ನಿರಂತರವಾಗಿ ಕಾಡುತ್ತಿರುವ ಈ ತಾಂತ್ರಿಕ ಅಡಚಣೆಗಳಿಂದ ಅನ್ನಭಾಗ್ಯ ಯೋಜನೆಯ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆ. ಸರ್ಕಾರವು ಈ ಬಗ್ಗೆ ತಕ್ಷಣವೇ ಗಮನಹರಿಸಿ, ಸರ್ವರ್ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಪಡಿತರ ವಿತರಣೆಯನ್ನು ಸುಗಮಗೊಳಿಸಬೇಕು ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.

 

Leave A Reply

Your email address will not be published.