ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಆಘಾತ ನೀಡಲು ಸಿದ್ಧತೆ ನಡೆಸಿದೆ. ‘ಇ-ಕೆವೈಸಿ’ ಕಡ್ಡಾಯ ಪ್ರಕ್ರಿಯೆಯ ಬೆನ್ನಲ್ಲೇ, ರಾಜ್ಯದಲ್ಲಿರುವ ಅನರ್ಹ ಬಿಪಿಎಲ್ (BPL) ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಬೃಹತ್ ಕಾರ್ಯಾಚರಣೆಗೆ ಆಹಾರ ಇಲಾಖೆ ಚಾಲನೆ ನೀಡಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ರಾಜ್ಯಕ್ಕೆ ಕಳುಹಿಸಿರುವ ಶಂಕಾಸ್ಪದ ಪಡಿತರ ಚೀಟಿಗಳ ಪಟ್ಟಿಯನ್ನಾಧರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ರಾಜ್ಯದ ಸುಮಾರು 5 ಲಕ್ಷಕ್ಕೂ ಅಧಿಕ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳು ರದ್ದಾಗುವ ಭೀತಿ ಎದುರಾಗಿದೆ.
ಕೇಂದ್ರ ನೀಡಿರುವ ಒಟ್ಟು 5.01 ಲಕ್ಷ ಶಂಕಾಸ್ಪದ ಕಾರ್ಡ್‌ಗಳ ಪೈಕಿ 3.61 ಲಕ್ಷ ಕುಟುಂಬಗಳ ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತ ಹೆಚ್ಚಿರುವುದು ಕಂಡುಬಂದಿದೆ. ಇದರೊಂದಿಗೆ 88,467 ನಕಲಿ ಅಥವಾ ಅಂತಾರಾಜ್ಯ ಕಾರ್ಡ್‌ದಾರರು ಹಾಗೂ ಕಂಪನಿಗಳಲ್ಲಿ ನಿರ್ದೇಶಕರಾಗಿದ್ದುಕೊಂಡೇ ‘ಅನ್ನಭಾಗ್ಯ’ ಯೋಜನೆ ಲಾಭ ಪಡೆಯುತ್ತಿದ್ದ 17,996 ಕುಟುಂಬಗಳನ್ನು ಗುರುತಿಸಲಾಗಿದೆ. ಈ ಎಲ್ಲ ಕಾರ್ಡ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ನವೆಂಬರ್ 30ರ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಆದೇಶಿಸಲಾಗಿದೆ.
ಈ ಬಾರಿ ಅನರ್ಹರನ್ನು ಪತ್ತೆ ಹಚ್ಚಲು ಮಾನದಂಡಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ನಾಲ್ಕು ಚಕ್ರಗಳ ವಾಹನ ಹೊಂದಿರುವವರು ಮತ್ತು ಮೃತಪಟ್ಟವರ ಹೆಸರನ್ನು ಹೊರಗಿಡುವುದಷ್ಟೇ ಅಲ್ಲದೆ, ಅಂಚೆ ಇಲಾಖೆ ನೌಕರರು ಹಾಗೂ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS) ಅಡಿ ಬರುವ ಉದ್ಯೋಗಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಇದಲ್ಲದೆ, ರಾಜ್ಯ ಸರ್ಕಾರ ಕೂಡ ತನ್ನದೇ ಆದ ಮಾನದಂಡಗಳನ್ನು ಸೇರಿಸಿ ಹೆಚ್ಚುವರಿ ಶಂಕಾಸ್ಪದ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅದನ್ನು ಕೈಗೆತ್ತಿಕೊಳ್ಳಲಿದೆ.
ಈಗಾಗಲೇ ರಾಜ್ಯದ ‘ಕುಟುಂಬ ತಂತ್ರಾಂಶ’ದ ಮೂಲಕ ಒಟ್ಟು 15.89 ಲಕ್ಷ ಬಿಪಿಎಲ್ ಕಾರ್ಡ್‌ಗಳು ಅನರ್ಹವೆಂದು ಗುರುತಿಸಲ್ಪಟ್ಟಿದ್ದು, ಅವುಗಳಲ್ಲಿ 4.98 ಲಕ್ಷ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಕೇಂದ್ರ ನಿಗದಿಪಡಿಸಿರುವ ಗರಿಷ್ಠ ಮಿತಿ 4.01 ಕೋಟಿ ಫಲಾನುಭವಿಗಳಾಗಿದ್ದರೂ, ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ 4.45 ಕೋಟಿ ಫಲಾನುಭವಿಗಳಿದ್ದಾರೆ. ಹೆಚ್ಚುವರಿ ಫಲಾನುಭವಿಗಳಿಗಾಗಿ ಸರ್ಕಾರ ಪ್ರತಿ ತಿಂಗಳು 2.10 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಖರೀದಿಸುತ್ತಿದ್ದು, ಈ ಹೊಸ ಪರಿಶೀಲನಾ ಪ್ರಕ್ರಿಯೆಯಿಂದ ಸರ್ಕಾರದ ಮೇಲಿನ ಆರ್ಥಿಕ ಹೊರೆ ಕೊಂಚ ತಗ್ಗುವ ನಿರೀಕ್ಷೆಯಿದೆ.