ಕಲಬುರಗಿ: ದೀಪಾವಳಿ ಹಬ್ಬದ ಸಡಗರ ಸಂಭ್ರಮದ ಸಂಧರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಜೀವನದ ಮೇಲೆ ಭಾರಿ ಬರೆ ಎಳೆದಿದೆ ಎಂದು ಕಮಲಾಪೂರ ತಾಲೂಕು ಬಿಜೆಪಿ ಯುವ ಮುಖಂಡ ಸುರೇಶ ರಾಠೋಡ ಉಗ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು,ಜನತೆಗೆ
ಗ್ಯಾರೆಂಟಿ ಯೋಜನೆಗಳನ್ನು ಕೊಡುವ ನೆಪದಲ್ಲಿ ಅದರ ಎರಡು ಪಟ್ಟು ಹಣವನ್ನು ಜನರ ಜೇಬಿನಿಂದ ಕಿತ್ತುಕೊಳ್ಳಲಾಗುತ್ತಿದೆ.ಯಾವುದೇ ಸಮರ್ಪಕ ಕಾರಣಗಳಿಲ್ಲದೆ ಸರ್ಕಾರ ಏಕಾ ಏಕೀ ದಿಢೀರನೆ ಬೆಲೆ ಏರಿಸಿರುವುದು ಜನರ ಜೀವನವನ್ನು ಸಂಕಷ್ಟಕ್ಕೀಡು ಮಾಡಿದೆ. ಮಳೆ ಇಲ್ಲದೆ ರಾಜ್ಯ ಬರಗಾಲ ಎದುರಿಸುತ್ತಿದೆ. ಜನರು ರಾಜ್ಯ ಬಿಟ್ಟು ಗುಳೆ ಹೋಗುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ರಜೆಗೆ ಊರಿಗೆ ಹೋಗಿ, ಬರುವ ಪ್ರಯಾಣಿಕರಿಗೆ ಪ್ರಯಾಣ ದರ ಹೆಚ್ಚಳ. ಹಾಲು ಮೊಸರಿನ ಬೆಲೆ ದಿಢೀರ್ ಏರಿಕೆ, ವಿದ್ಯುತ್, ನೀರಿನ ಕರ, ಮುದ್ರಾಂಕ ಸೇವೆ ಶುಲ್ಕ ಹೆಚ್ಚಳದಿಂದ ರಾಜ್ಯದ ಜನ ಕಂಗಾಲಾಗಿದ್ದಾರೆ. ಹಬ್ಬ ಹರಿದಿನ ಸಂದರ್ಭದಲ್ಲಿ ಆಡಳಿತ ನಡೆಸುವ ಸರ್ಕಾರ ಬೋನಸ್ ರೂಪದಲ್ಲಿ ವಿಶೇಷ ಸೌಲತ್ತುಗಳನ್ನು ಘೋಷಿಸುವ ಬದಲಾಗಿ ಬೆಲೆ ಏರಿಕೆಯಂತಹ ಶಿಕ್ಷೆಯನ್ನು ನೀಡುವದು ಯಾವ ನ್ಯಾಯ ಜನ ಸಾಮಾನ್ಯರಿಂದ ಹಿಡಿ ಶಾಪ ಹಾಕಿಸಿಕೊಳ್ಳದೆ, ಜನ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದು ಪುಣ್ಯ ಕಟ್ಟಿಕೊಳ್ಳಲಿ ಎಂದು ಅವರು ತಿಳಿಸಿದ್ದಾರೆ.