Shubhashaya News

ಬಸ್ ಪ್ರಯಾಣ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ ವಿಜಯರಾಜ್ ಕೊರಡಂಪಳ್ಳಿ ಆಕ್ರೋಶ

ಕಲಬುರಗಿ ಜಿಲ್ಲೆ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರ ಜೀವನ ನಿರ್ವಹಣೆ ಕಷ್ಟಕರವಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿರುವುದನ್ನು ಬಿಜೆಪಿ ಎಸ್‌ಸಿ ಮೋರ್ಚಾದ ಮಾಜಿ ತಾಲೂಕು ಪ್ರಧಾನ ಕಾರ್ಯದರ್ಶಿ ಸೇಡಂ ವಿಜಯರಾಜ್ ಕೊರಡಂಪಳ್ಳಿ ತೀವ್ರವಾಗಿ ಖಂಡಿಸಿದ್ದಾರೆ.

ಈಗಾಗಲೇ ದಿನಬಳಕೆಯ ವಸ್ತುಗಳು,ತರಕಾರಿ,ಅಡುಗೆ ಎಣ್ಣೆ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇತ್ತೀಚೆಗೆ ಹಾಲಿನ ದರ ಹೆಚ್ಚಳವೂ ಕುಟುಂಬಗಳ ಮಾಸಿಕ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ಉಂಟುಮಾಡಿದೆ. ಮಕ್ಕಳಿಗೆ ಪ್ರತಿದಿನ ಹಾಲು ನೀಡುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಕೂಡ ತಮ್ಮ ಖರ್ಚುಗಳನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಡವರು, ಕೂಲಿ ಕಾರ್ಮಿಕರು, ರೈತರ ಮೇಲೆ ಹೆಚ್ಚುವರಿ ಹೊರೆ ಗ್ರಾಮೀಣ ಭಾಗದ ಜನರು ಉದ್ಯೋಗ, ಶಿಕ್ಷಣ, ವ್ಯಾಪಾರ, ಕೃಷಿ ಚಟುವಟಿಕೆಗಳು ಹಾಗೂ ಆರೋಗ್ಯ ಸೇವೆಗಳಿಗಾಗಿ ಪ್ರತಿನಿತ್ಯ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ದಿನಗೂಲಿ ಕೆಲಸಕ್ಕೆ ತೆರಳುವ ಕಾರ್ಮಿಕರು, ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳುವ ವೃದ್ಧರು, ರೈತರು ಹಾಗೂ ಸಣ್ಣ ವ್ಯಾಪಾರಿಗಳು ಪ್ರತಿದಿನ ಬಸ್ ಪ್ರಯಾಣ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಈಗ ಪ್ರಯಾಣ ದರ ಹೆಚ್ಚಳದಿಂದ ಇವರ ದಿನನಿತ್ಯದ ಖರ್ಚು ಮತ್ತಷ್ಟು ಹೆಚ್ಚಾಗಲಿದೆ.ಸರ್ಕಾರ ಸಾರ್ವಜನಿಕ ಸಾರಿಗೆಯನ್ನು ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಒದಗಿಸಬೇಕಾದ ಜವಾಬ್ದಾರಿ ಹೊಂದಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ನಿರ್ವಹಣೆಯ ಹೆಸರಿನಲ್ಲಿ ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಹಾಕುವ ಬದಲು, ಸಂಸ್ಥೆಗಳಲ್ಲಿನ ಆಡಳಿತಾತ್ಮಕ ವೆಚ್ಚ, ನಿರ್ವಹಣಾ ವ್ಯವಸ್ಥೆ ಹಾಗೂ ಆದಾಯದ ಮೂಲಗಳನ್ನು ಪರಿಶೀಲಿಸಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.ರಾಜ್ಯ ಸರ್ಕಾರ ಜನರ ಸಂಕಷ್ಟವನ್ನು ಅರ್ಥಮಾಡಿಕೊಂಡು ಬಸ್ ಪ್ರಯಾಣ ದರ ಏರಿಕೆ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಬೇಕು. ಹೆಚ್ಚಿಸಿರುವ ದರವನ್ನು ಕೂಡಲೇ ಹಿಂಪಡೆಯಬೇಕು. ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡವರು, ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳ ಹಿತ ಕಾಪಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನಸಾಮಾನ್ಯರ ದೈನಂದಿನ ಜೀವನದ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Leave A Reply

Your email address will not be published.