ಬೆಂಗಳೂರು: ಇತ್ತೀಚೆಗಷ್ಟೇ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ್ದ ರಾಜ್ಯ ಸರ್ಕಾರ, ಇದೀಗ ಕೆಎಸ್ಆರ್ಟಿಸಿ (KSRTC) ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣದ ಟಿಕೆಟ್ ದರವನ್ನು ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆದಿದೆ. ಸಾರಿಗೆ ಇಲಾಖೆಯು ಟಿಕೆಟ್ ದರದಲ್ಲಿ 9 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ದೈನಂದಿನ ಪ್ರಯಾಣಿಕರು ಹಾಗೂ ಸಾಮಾನ್ಯ ಸಾರ್ವಜನಿಕರ ಜೇಬಿಗೆ ದೊಡ್ಡ ಕತ್ತರಿ ಬೀಳುವುದು ಖಚಿತವಾಗಿದೆ. ಕೆಎಸ್ಆರ್ಟಿಸಿ ಮಾತ್ರವಲ್ಲದೆ ರಾಜಧಾನಿ ಬೆಂಗಳೂರಿನಲ್ಲಿ ಸಂಚರಿಸುವ ಬಿಎಂಟಿಸಿ (BMTC) ಬಸ್ ಟಿಕೆಟ್ ದರಗಳನ್ನು ಸಹ ಪ್ರಯಾಣದ ಹಂತಗಳಿಗೆ (ಸ್ಟೇಜ್) ತಕ್ಕಂತೆ ಪರಿಷ್ಕರಿಸಿ ಏರಿಕೆ ಮಾಡಲಾಗಿದೆ.
ಬಿಎಂಟಿಸಿ ಎಸಿ ಬಸ್ ಪ್ರಯಾಣ ಇನ್ನಷ್ಟು ದುಬಾರಿ: ಬಿಎಂಟಿಸಿ ಹವಾನಿಯಂತ್ರಿತ (AC) ಬಸ್‌ಗಳ ದರದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಎಸಿ ಬಸ್‌ಗಳಲ್ಲಿ 6 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ 5 ರೂಪಾಯಿ, 6 ರಿಂದ 18 ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ 10 ರೂಪಾಯಿ ಹಾಗೂ ಸುದೀರ್ಘ ದೂರದ ಪ್ರಯಾಣಕ್ಕೆ ಗರಿಷ್ಠ 15 ರೂಪಾಯಿಗಳವರೆಗೆ ದರ ಹೆಚ್ಚಿಸಲಾಗಿದೆ.
ಇದರಿಂದಾಗಿ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣ ದರ ಹೀಗಿರಲಿದೆ:
ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳ: ₹55 ರಿಂದ ₹65
ಬನಶಂಕರಿಯಿಂದ ಐಟಿಪಿಎಲ್ (ITPL): ₹50 ರಿಂದ ₹60
ಕೆ.ಆರ್. ಪುರಂನಿಂದ ಸಿಲ್ಕ್ ಬೋರ್ಡ್: ₹40 ರಿಂದ ₹55
ಸಿಲ್ಕ್ ಬೋರ್ಡ್‌ನಿಂದ ಕಾಡುಗೋಡಿ: ₹50 ರಿಂದ ₹60
ಮೆಜೆಸ್ಟಿಕ್‌ನಿಂದ ಅತ್ತಿಬೆಲೆ: ₹60 ರಿಂದ ₹70
ಸಾಮಾನ್ಯ ಬಸ್‌ಗಳ ದರ ವಿವರ ಹಾಗೂ ಸಾರ್ವಜನಿಕರ ಆಕ್ರೋಶ: ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲೂ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ. 2 ಕಿ.ಮೀ ವರೆಗಿನ ಪ್ರಯಾಣಕ್ಕೆ 4 ರೂಪಾಯಿ, 2 ರಿಂದ 4 ಕಿ.ಮೀ ವರೆಗಿನ ಪ್ರಯಾಣಕ್ಕೆ 6 ರೂಪಾಯಿ ಹೆಚ್ಚಳವಾಗಿದ್ದು, ದೂರದ ಪ್ರಯಾಣಕ್ಕೆ ಗರಿಷ್ಠ 12 ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದೆ.
ಸಾಮಾನ್ಯ ಬಸ್‌ಗಳಲ್ಲಿ ಪ್ರಮುಖ ಮಾರ್ಗಗಳ ಪರಿಷ್ಕೃತ ದರ ಹೀಗಿದೆ:
ಮೆಜೆಸ್ಟಿಕ್‌ನಿಂದ ಶಿವಾಜಿನಗರ: ₹12 ರಿಂದ ₹18
ಮೆಜೆಸ್ಟಿಕ್‌ನಿಂದ ಯಶವಂತಪುರ: ₹18 ರಿಂದ ₹25
ಮೆಜೆಸ್ಟಿಕ್‌ನಿಂದ ಬನಶಂಕರಿ: ₹23 ರಿಂದ ₹35
ಮೆಜೆಸ್ಟಿಕ್‌ನಿಂದ ಅತ್ತಿಬೆಲೆ: ₹30 ರಿಂದ ₹42
ಮೆಜೆಸ್ಟಿಕ್‌ನಿಂದ ವಿಜಯನಗರ: ₹18
ಮೆಜೆಸ್ಟಿಕ್‌ನಿಂದ ಕಾಡುಗೋಡಿ: ₹30 ರಿಂದ ₹40
ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತಂಗೆಟ್ಟಿರುವ ಜನಸಾಮಾನ್ಯರಿಗೆ, ಸಾರಿಗೆ ದರ ಏರಿಕೆಯು ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಿದ್ದು, ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.