ರಾಜ್ಯದಲ್ಲಿ ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದೆ. ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಪರಿಷ್ಕೃತ ದರವು ಇಂದು ರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಸಂಸ್ಥೆಯ ನಿರ್ವಹಣಾ ವೆಚ್ಚ ಹಾಗೂ ನೌಕರರ ಹಿತದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಇದೆ ಸಂದರ್ಭದಲ್ಲಿ ಬಿಎಂಟಿಸಿ ಬಸ್ ಟಿಕೆಟ್ ದರ ಕೂಡ ರಾಜ್ಯ ಸರ್ಕಾರ ಏರಿಕೆ ಮಾಡಿದ್ದು, ಬಿಎಂಟಿಸಿ ಬಸ್ ನಲ್ಲಿ ಈ ಹಿಂದೆ ಕನಿಷ್ಠ ದರ ಸ್ಟೇಜ್ ಗೆ 6 ರೂ.ಇತ್ತು ಇದೀಗ 6 ರುಪಾಯಿಂದ ರೂ.10 ಗೆ ಏರಿಕೆ ಮಾಡಿದ್ದೇವೆ ಗರಿಷ್ಠ ದರ 35 ಇಂದ 45 ರೂಪಾಯಿಗೆ ಏರಿಕೆ ಮಾಡಿದ್ದೇವೆ ಎಂದರು.
ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ನಷ್ಟವಾಗಿಲ್ಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರಸ್ತುತ 1,03,600 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 26,125 ಬಸ್ಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ‘ಶಕ್ತಿ’ ಯೋಜನೆಯಡಿ ಪ್ರತಿದಿನ 74.4 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, ಅದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ನಿಗಮಗಳಿಗೆ ಪಾವತಿಸುತ್ತಿದೆ. ಹೀಗಾಗಿ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಗೆ ಯಾವುದೇ ರೀತಿಯ ನಷ್ಟ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ದರ ಏರಿಕೆಗೆ ಡೀಸೆಲ್, ಬಿಡಿಭಾಗಗಳ ಬೆಲೆ ಏರಿಕೆಯೇ ಕಾರಣ ಕಳೆದ 10 ವರ್ಷಗಳಲ್ಲಿ ಕೇವಲ ಒಮ್ಮೆ ಮಾತ್ರ (2025 ರಲ್ಲಿ) ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಪ್ರಸ್ತುತ ಡೀಸೆಲ್ ದರ, ಟೈರ್ ಬೆಲೆ ಹಾಗೂ ಇತರ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿವೆ. ಜೊತೆಗೆ ನೌಕರರ ವೇತನವನ್ನೂ ಏರಿಸಲಾಗಿದೆ. 2021 ರಲ್ಲಿ ಶ್ರೀನಿವಾಸ್ ಮೂರ್ತಿ ಸಮಿತಿಯು ಕಾಲಕಾಲಕ್ಕೆ ಬಸ್ ದರ ಹೆಚ್ಚಿಸಬೇಕೆಂದು ವರದಿ ನೀಡಿತ್ತು. ಇತ್ತೀಚೆಗೆ ಅತುಲ್ ತಿವಾರಿ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿದ್ದು, ಅವರ ವರದಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಾರಿಗೆ ಸಂಸ್ಥೆಗಳಿಗೆ ದರ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾಲು ಸಾಲು ಬಾಕಿ ಹಣ ತೀರಿಸಲು ದರ ಏರಿಕೆ ಅನಿವಾರ್ಯ ನಾಲ್ಕೂ ಸಾರಿಗೆ ಸಂಸ್ಥೆಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟವನ್ನು ವಿವರಿಸಿದ ಸಚಿವರು, ನೌಕರರ ಭವಿಷ್ಯ ನಿಧಿಗೆ (PF) 2,916 ಕೋಟಿ ರೂಪಾಯಿ, ನಿವೃತ್ತ ನೌಕರರ ಬಾಕಿ ಹಣ 603 ಕೋಟಿ ರೂಪಾಯಿ, ವೇತನ ಪರಿಷ್ಕರಣೆಯ ಮೊತ್ತ 664 ಕೋಟಿ ರೂಪಾಯಿ ಹಾಗೂ ಸಿಬ್ಬಂದಿಗಳ ಇತರೆ ಪಾವತಿಗಾಗಿ 356 ಕೋಟಿ ರೂಪಾಯಿ ನೀಡಬೇಕಾದ ಬಾಕಿಯಿದೆ. ಈ ಸಾಲ ಹಾಗೂ ಬಾಕಿ ಪಾವತಿಗಳ ಸುಗಮ ನಿರ್ವಹಣೆಗೆ ಹಣಕಾಸಿನ ಅಗತ್ಯವಿದೆ ಎಂದರು.
ಇಂದು ರಾತ್ರಿಯಿಂದಲೇ ರೂ. 9 ಟಿಕೆಟ್ ದರ ಏರಿಕೆ ಜಾರಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಾರಿಗೆ ಸಂಸ್ಥೆಗಳ ಆರ್ಥಿಕ ಚೇತರಿಕೆಗೆ KSRTC ಬಸ್ ಟಿಕೆಟ್ ದರವನ್ನು 9 ರೂಪಾಯಿ ಹೆಚ್ಚಳ ಮಾಡಲಾಗುತ್ತಿದೆ. ಈ ಪರಿಷ್ಕೃತ ಬಸ್ ಪ್ರಯಾಣ ದರವು ಇಂದು ರಾತ್ರಿಯಿಂದಲೇ ಇಡೀ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಸಚಿವ ಭೈರತಿ ಸುರೇಶ್ ಅವರು ತಿಳಿಸಿದ್ದಾರೆ.