ಸಾರ್ವಜನಿಕ ಅಧಿಕಾರ ಎನ್ನುವುದು ಜನಸೇವೆಗಾಗಿ ಇದೆಯೇ ಹೊರತು ರಾಜಕೀಯವಾಗಿ ನೆಲೆ ಕಳೆದುಕೊಂಡವರಿಗೆ ಆಶ್ರಯ ಅಥವಾ ಪುನರ್ವಸತಿ ಕಲ್ಪಿಸಲು ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಸಾಗುವಳಿ ಭೂಮಿ ಮಂಜೂರಾತಿಗಾಗಿ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕೆ. ಗೋಪಾಲ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ‘ಹೆಚ್ಚುವರಿ ಸಮಿತಿ’ಯನ್ನು ಹೈಕೋರ್ಟ್ನ ವಿಭಾಗೀಯ ಪೀಠ ರದ್ದುಗೊಳಿಸಿ ತೀರ್ಪು ನೀಡಿದೆ.
ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಶಾಸಕ ಗುರುರಾಜ ಗಂಟಿಹೊಳೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್.ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ, ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಧಿಕಾರ ಬಿಟ್ಟುಕೊಡಲು ಇಷ್ಟಪಡದ ವ್ಯಕ್ತಿಯೊಬ್ಬರ ವೈಯಕ್ತಿಕ ಬಯಕೆಗೆ ಸಾರ್ವಜನಿಕ ಆಡಳಿತದ ಗತಿಯನ್ನು ನಿರ್ಧರಿಸಲು ಅವಕಾಶ ನೀಡಲಾಗದು. ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ನಾಯಕರೊಬ್ಬರು ಹಿಂಬಾಗಿಲ ಮುಖಾಂತರ ಅಧಿಕಾರ ಪಡೆಯಲು ನಡೆಸಿದ ಈ ಪ್ರಯತ್ನವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಚಾಟಿ ಬೀಸಿದೆ.
ಕರ್ನಾಟಕ ಭೂ ಕಂದಾಯ ನಿಯಮ 108-ಇಇ(1)(a) ರ ಅಡಿ ಬರುವ ‘ಹೆಚ್ಚುವರಿ ಸಮಿತಿ’ಗಳ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತಕ್ಷಣವೇ ವಸ್ತುನಿಷ್ಠ ಮಾನದಂಡಗಳನ್ನು ಒಳಗೊಂಡ ಪಾರದರ್ಶಕ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಈ ನೇಮಕಾತಿಗಳು ವೈಯಕ್ತಿಕ ಅಥವಾ ಬಾಹ್ಯ ಪರಿಗಣನೆಗಳಿಂದ ಪ್ರಭಾವಿತವಾಗದೆ, ಕಾನೂನುಬದ್ಧ ಉದ್ದೇಶಗಳನ್ನು ಈಡೇರಿಸುವಂತಿರಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
ಹೊಸದಾಗಿ ರೂಪಿಸುವ ಮಾರ್ಗಸೂಚಿಗಳಲ್ಲಿ ಸೂಕ್ತ ಕಾನೂನು ಜ್ಞಾನ, ಆಡಳಿತಾತ್ಮಕ ಸಾಮರ್ಥ್ಯ, ಸಂಬಂಧಿತ ಅನುಭವ, ಪ್ರಾಮಾಣಿಕತೆ, ಗೌಪ್ಯತೆ ಕಾಪಾಡುವ ಗುಣ ಮತ್ತು ದೋಷರಹಿತ ನಡವಳಿಕೆಯನ್ನು ಮೂಲ ಮಾನದಂಡಗಳನ್ನಾಗಿ ಪರಿಗಣಿಸಬೇಕು. ಸಮಿತಿಗೆ ವಹಿಸಲಾದ ಕಾರ್ಯಗಳ ಸ್ವರೂಪಕ್ಕೆ ತಕ್ಕಂತೆ ನೇಮಕಾತಿ ಪ್ರಕ್ರಿಯೆಯು ನ್ಯಾಯಯುತ ಹಾಗೂ ನಿರಂಕುಶವಲ್ಲದ ರೀತಿಯಲ್ಲಿ ನಡೆಯುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಪೀಠ ತಾಕೀತು ಮಾಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಗೆಲುವು ಸಾಧಿಸಿದ್ದರು. ಶಾಸಕರ ನೇತೃತ್ವದಲ್ಲಿ ಭೂಮಿ ಮಂಜೂರಾತಿ ಸಮಿತಿ ರಚನೆಯಾಗಿದ್ದರೂ, ಚುನಾವಣೆಯಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ್ ಪೂಜಾರಿ ಅವರ ಕೋರಿಕೆಯಂತೆ ಸರ್ಕಾರ 2023ರ ಡಿಸೆಂಬರ್ 4ರಂದು ಅವರ ಅಧ್ಯಕ್ಷತೆಯಲ್ಲೇ ಮತ್ತೊಂದು ‘ಹೆಚ್ಚುವರಿ ಸಮಿತಿ’ ರಚಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಈ ಹಿಂದೆ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಗಂಟಿಹೊಳೆ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ವಿಭಾಗೀಯ ಪೀಠ, ಈಗ ಸರ್ಕಾರದ ಅಧಿಸೂಚನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.