Shubhashaya News

“ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ” : ರಾಹುಲ್ ಗಾಂಧಿ ಭೇಟಿ ವೇಳೆ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ!

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ‘ಸ್ಟಿಂಗ್ ಕಾರ್ಯಾಚರಣೆ’ ಪ್ರಕರಣದ ಕಾವು ಈಗ ಹೈಕಮಾಂಡ್ ಅಂಗಳ ತಲುಪಿದೆ. ಈ ವಿಚಾರವಾಗಿ ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಭೇಟಿಯ ವೇಳೆ ತಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿಗಳು ಹಾಗೂ ಮೈಸೂರು ದಸರಾ ಆಯೋಜನೆಯಲ್ಲಾದ ಲೋಪಗಳ ಕುರಿತು ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ತಮ್ಮದೇ ಪಕ್ಷದ ನಾಯಕರು ತಮ್ಮ ವಿರುದ್ಧ ಷಡ್ಯಂತರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, “ಗೌರವಯುತವಾಗಿ ಅಧಿಕಾರ ಬಿಟ್ಟುಕೊಟ್ಟ ಮೇಲೆಯೂ ನನ್ನ ವಿರುದ್ಧ ಈ ರೀತಿಯ ಕೃತ್ಯಗಳು ನಡೆಯುತ್ತಿವೆ. ನನ್ನನ್ನು ರಾಜಕೀಯದಿಂದಲೇ ದೂರ ಇಡಬೇಕೆಂಬ ಹೊನ್ನಾರ ಇದೆಯೋ ಗೊತ್ತಿಲ್ಲ. ಸಂಪೂರ್ಣವಾಗಿ ನನ್ನ ತೇಜೋವಧೆ ಮಾಡುವ ಸಲುವಾಗಿಯೇ ಈ ಷಡ್ಯಂತರ ಹೆಣೆಯಲಾಗಿದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಹೈಕಮಾಂಡ್ ಮಟ್ಟದಲ್ಲೇ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ರಾಹುಲ್ ಗಾಂಧಿ ಬಳಿ ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

ಇದೇ ವೇಳೆ ವಿಶ್ವವಿಖ್ಯಾತ ಮೈಸೂರು ದಸರಾ ಆಯೋಜನೆ ವಿಚಾರದಲ್ಲೂ ಸಿದ್ದರಾಮಯ್ಯ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. “ಯತೀಂದ್ರ ಅವರು ದಸರಾ ಉಸ್ತುವಾರಿಯಾಗಿದ್ದರೂ ದಿನಕ್ಕೆ ಇಬ್ಬರು ಸಚಿವರನ್ನು ನೇಮಕ ಮಾಡಲಾಗಿದೆ. ಸರ್ಕಾರದ ಅಧಿಕೃತ ಜಾಹೀರಾತುಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇಂತಹ ನಡೆಯನ್ನು ಸಹಿಸಲು ಸಾಧ್ಯವಿಲ್ಲ, ಎಲ್ಲರೂ ಬಂದು ನನ್ನ ಬಳಿಯೇ ದೂರು ಹೇಳುತ್ತಿದ್ದಾರೆ. ನಾನು ಏನು ಮಾಡಲಿ? ಇದಕ್ಕಿಂತ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದೇ ಒಳ್ಳೆಯದು” ಎಂದು ತೀವ್ರ ನೋವಿನಿಂದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 

Leave A Reply

Your email address will not be published.