ಕರ್ನಾಟಕದ ಗೃಹ ಸಚಿವರು ನನ್ನನ್ನು ನಿರುದ್ಯೋಗಿ ಸಚಿವ ಎಂದು ಮೊದಲಿಸಿದ್ದಾರೆ. ಅದನ್ನು ನಾನು ಸವಾಲಾಗಿ ಸ್ವೀಕರಿಸಿದ್ದೇನೆ. ಅವರಿಗೆ ನನ್ನ ಇಲಾಖೆಗಳ ಬಗ್ಗೆ ಮತ್ತು ನಾನು ಮಾಡಿರುವ ಕೆಲಸಗಳ ಬಗ್ಗೆ ಮಾಹಿತಿ ಇದ್ದಂತಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ನೀಡಿದರು.
ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ದಾಖಲಾಗಿದೆ. ಅನೇಕ ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ. ಫೇಮ್ 2, ಪಿಎಂ ಇ ಡ್ರೈವ್, ಉತ್ಪಾದನಾ ಉತ್ತೇಜಕ ಯೋಜನೆ, ಬಂಡವಾಳ ಸರಕು ಮತ್ತು ಉಪಕರಣಗಳ ಯೋಜನೆ (capital goods and equipment scheme), ದೇಶಾದ್ಯಂತ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಬ್ಯಾಟರಿಕೋಶಗಳ ಸ್ಥಾಪನೆಗೆ ₹11,400 ಕೋಟಿ ಮೊತ್ತದ ಬೃಹತ್ ಯೋಜನೆ ಜಾರಿಗೆ ತರಲಾಗಿದೆ ಎಂದರು ಸಚಿವರು.
ಎಲೆಕ್ಟ್ರಿಕ್ ವಾಹನಗಳ ಆವಿಷ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ಕೊಡಲಾಗಿದೆ. ಆಮದು ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ. ಭಾರತದಲ್ಲಿಯೇ ಮಹತ್ವದ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನ ವಲಯಕ್ಕೆ ಉತ್ತೇಜಿಸಲು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದ ₹11,900 ಕೋಟಿಗಳ ಯೋಜನೆಗಳ ಫಲವಾಗಿ 30 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದರು ಸಚಿವರು.
ಈ ಯೋಜನೆಯು 14,028 ಎಲೆಕ್ಟ್ರಿಕ್ ಬಸ್ಗಳ ನಿಯೋಜನೆಗೆ ₹4,391 ಕೋಟಿ, ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ₹2,000 ಕೋಟಿ ಮತ್ತು ಪರೀಕ್ಷಾ ಏಜೆನ್ಸಿಗಳನ್ನು ಆಧುನೀಕರಿಸಲು ₹780 ಕೋಟಿಗಳನ್ನು ಒದಗಿಸುತ್ತದೆ, ಇದರಿಂದಾಗಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ನಿಯೋಜನೆಗೆ ದೊಡ್ಡ ಕೊಡುಗೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.
₹3,435 ಕೋಟಿ ವೆಚ್ಚದೊಂದಿಗೆ ಪಿಎಂ ಇ-ಬಸ್ ಸೇವೆ ಯೋಜನೆಯ ಮೂಲಕ 38,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಗಳ ನಿಯೋಜನೆ ಮಾಡಲಾಗುತ್ತಿದೆ. 27,555 ಎಲೆಕ್ಟ್ರಿಕ್ ಬಸ್ಗಳನ್ನು ಈಗಾಗಲೇ ಈ ಕಾರ್ಯವಿಧಾನದಡಿಯಲ್ಲಿ ನೋಂದಾಯಿಸಲಾಗಿದೆ. ಬೆಂಗಳೂರು ನಗರ ಒಂದಕ್ಕೆ 4500 ಎಲೆಕ್ಟ್ರಿಕ್ ಬಸ್ಸುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
₹18,100 ಕೋಟಿ ವೆಚ್ಚದಲ್ಲಿ ಸುಧಾರಿತ ಬ್ಯಾಟರಿ ಕೋಶಕ್ಕಾಗಿ 50 GWh ದೇಶೀಯ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಫಲಾನುಭವಿ ಕಂಪನಿಗಳು ₹5,180 ಕೋಟಿ ಹೂಡಿಕೆಗಳನ್ನು ವರದಿ ಮಾಡಿದ್ದವು ಎಂದು ಈ ಸಂದರ್ಭದಲ್ಲಿ ಸಚಿವರು ಉಲ್ಲೇಖಿಸಿದರು.
ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಭೂಮಿಯಲ್ಲಿನ ಅಪರೂಪದ ಖನಿಜಗಳನ್ನು ಹೊರತೆಗೆದು ಬಳಸುವುದಕ್ಕೆ ₹7,280 ಕೋಟಿ ಮೌಲ್ಯದ ಉತ್ಪಾದನಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದ ಸಚಿವ ಕುಮಾರಸ್ವಾಮಿ ಅವರು; ಇದಕ್ಕಾಗಿ ಜಾಗತಿಕ ಟೆಂಡರ್ ಮೂಲಕ 20 ಬಿಡ್ಗಳನ್ನು ಸಲ್ಲಿಸಲಾಗಿದೆ ಎಂದರು.
ಈಗಾಗಲೇ ರೂಪಿಸಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ ಹಾಗೂ ಅನುಷ್ಠಾನದ ಹಂತದಲ್ಲಿರುವ ಯೋಜನೆಗಳಿಗೆ ಮತ್ತಷ್ಟು ವೇಗವನ್ನು ನೀಡಲಾಗುತ್ತಿದೆ. ಅವುಗಳ ಪ್ರತಿಫಲವು ಶೀಘ್ರಗತಿಯಲ್ಲಿ ಜನತೆಗೆ ಸಿಗುವಂತೆ ಕೇಂದ್ರ ಸರ್ಕಾರವು ನೋಡಿಕೊಳ್ಳುತ್ತಿದೆ. ಇದಕ್ಕಾಗಿ ವಿಶೇಷವಾಗಿ ಮೇಲುಸ್ತುವಾರಿ ಮಾಡಲಾಗುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ನಾನು ಬೃಹತ್ ಕೈಗಾರಿಕೆ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಭಾರತ್ ಹೆವಿ ಎಲೆಕ್ಟ್ರಿಕಲ್ (BHEL) ₹200 ಕೋಟಿ ಲಾಭದಲ್ಲಿತ್ತು. ಈಗ ಅದರ ಲಾಭ ₹1500 ಕೋಟಿ ಮೀರಿದೆ. ಭಾರತೀಯ ಉಕ್ಕು ಪ್ರಾಧಿಕಾರ (SAIL) ಶೇ.315ರಷ್ಟು ಬೆಳೆವಣಿಗೆ ಸಾಧಿಸಿದೆ. ಹಾಗೆಯೇ ಭದ್ರಾವತಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉಳಿಸಲು ನಾನು ಎಷ್ಟು ಪ್ರಯತ್ನ ಮಾಡಿದ್ದೇನೆ. ಎಷ್ಟು ಸಭೆಗಳನ್ನು ನಡೆಸಿದ್ದೇನೆ? ಎಷ್ಟು ಸಲ ಕಾರ್ಖಾನೆಗೆ ಭೇಟಿ ನೀಡಿದ್ದೇನೆ? ಹಾಗೆಯೇ ಇಡೀ ದೇಶದಲ್ಲಿ ನನ್ನ ಎರಡು ಸಚಿವಾಲಯಗಳ ವತಿಯಿಂದ ಎಷ್ಟು ಕೆಲಸಗಳು ಆಗಿವೆ ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆ ಮಾಹಿತಿ ಪಡೆದುಕೊಂಡು ಮಾತನಾಡಲಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಉದ್ದಿಮೆದಾರರು ಕರ್ನಾಟಕ ಎಂದರೆ ಕೈ ಮುಗಿಯುತ್ತಾರೆ?
ಇಷ್ಟೆಲ್ಲಾ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ತಾವು ಐಟಿಬಿಟಿ ಸಚಿವರಾದ ಎಷ್ಟು ಬಂಡವಾಳ ಹೂಡಿಕೆ ಮಾಡಿಸಿದ್ದಾರೆ? ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ನೋಡಲಿ ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.
ನಾನು ಕೂಡ ಬೃಹತ್ ಕೈಗಾರಿಕೆ ಸಚಿವನಾಗಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅನೇಕ ಉದ್ಯಮಿಗಳು ನನ್ನನ್ನು ಭೇಟಿಯಾಗುತ್ತಾರೆ. ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪಿಸಿ ಎಂದರೆ ಕೈ ಮುಗಿಯುತ್ತಾರೆ. ನಮ್ಮ ಬೇಡಿಕೆಯನ್ನು ನಯವಾಗಿ ತಿರಸ್ಕರಿಸುತ್ತಾರೆ. ಅಷ್ಟೇ ಏಕೆ? ಕೋಲಾರದ ನರಸಾಪುರದಲ್ಲಿ ವಾರ್ಷಿಕ 1 ದಶಲಕ್ಷ ಎಲೆಕ್ಟ್ರಿಕ್ ವಾಹನ ತಯಾರಿಸುವ ಹೋಂಡಾ ಮೋಟಾರ್ ಸೈಕಲ್ & ಸ್ಕೂಟರ್ ಇಂಡಿಯಾ ಕಂಪನಿ ಹಿಂದಕ್ಕೆ ಹೋಗಿದೆ. ಆ ಕಂಪನಿ ಯಾಕೆ ತನ್ನ ಯೋಜನೆಯನ್ನು ರದ್ದು ಮಾಡಿತು? ಇದಕ್ಕೆ ಖರ್ಗೆ ಅವರು ಏನಾದರೂ ಹೇಳಬೇಕಲ್ಲವೇ? ಎಂದರು ಕುಮಾರಸ್ವಾಮಿ ಅವರು.
ಪುಣೆ, ಹೈದರಾಬಾದ್, ಆಂಧ್ರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಿಗೆ ಉದ್ಯಮಿಗಳು ಮುಗಿಬೀಳುತ್ತಿದ್ದಾರೆ. ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಈಗಿಲ್ಲ. ಪರ್ಮನೆಂಟ್ ಮ್ಯಾಗ್ನೆಟ್ ಕಂಪನಿಗಳು ಯಾಕೆ ಕರ್ನಾಟಕಕ್ಕೆ ಬರ್ತಿಲ್ಲ? ಒರಿಸ್ಸಾ, ಆಂಧ್ರ, ತಮಿಳುನಾಡು, ಕೇರಳಕ್ಕೆ ಹೋಗ್ತಿದ್ದಾರೆ. ಅವರು ಬರೋದಕ್ಕೆ ರಾಜ್ಯ ಸರಕಾರ ಬಿಡುತ್ತಿಲ್ಲ ಎಂದು ಸಚಿವರು ದೂರಿದರು.
ಮುಖ್ಯಮಂತ್ರಿಗಳು ವಿಕಸಿತ ಕರ್ನಾಟಕ 2047 ಅಂತ ಹೇಳಿ ಉದ್ಯಮ ಕರ್ನಾಟಕ, ಸಮೃದ್ಧಿ ಕರ್ನಾಟಕ, ಎಐ ಕರ್ನಾಟಕ ಸೇರಿದಂತೆ ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಪಾಪ.. ಅವರು ಇನ್ನೊಂದು ಕರ್ನಾಟಕ ಕರ್ನಾಟಕ ಮರೆತಿದ್ದಾರೆ! ಸ್ಟಿಂಗ್ ಕರ್ನಾಟಕ ಸ್ಕೀಮ್ ತೆಗೆದುಕೊಂಡು ಬನ್ನಿ ಎಂದು ಅವರಿಗೆ ಸಲಹೆ ಮಾಡುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.
ಪ್ರಿಯಾಂಕ್ ಖರ್ಗೆ ಅವರೇ ಇಷ್ಟೆಲ್ಲಾ ಹೇಳುವ ನೀವು ನಿಮ್ಮ ಕ್ಷೇತ್ರದ ಬಗ್ಗೆಯೂ ಮಾತನಾಡಬೇಕು. ನೀವು ಮತ್ತು ನಿಮ್ಮ ತಂದೆ ಮಾಡಿರುವ ಅಭಿವೃದ್ಧಿಯ ಬಗ್ಗೆ ಜನರಿಗೆ ತಿಳಿಸಬೇಕು. ನಿಮಗೆ ಇನ್ನೊಂದು ವರ್ಷ ಇದೆ. ಏನು ಅಭಿವೃದ್ಧಿ ಮಾಡುತ್ತೀರಿ? ಬೆಂಗಳೂರು, ಮೈಸೂರು ರೀತಿಯಲ್ಲಿ ಕಲಬುರಗಿ ಅಭಿವೃದ್ಧಿ ಮಾಡಿ ಎಂದು ನಿಮ್ಮ ತಂದೆ ಹೇಳಿದ್ದರು. ಹಾಗಾದರೆ, ಇಷ್ಟು ವರ್ಷಗಳಿಂದ ನೀವು, ನಿಮ್ಮ ತಂದೆ ತೆಗೆದುಕೊಂಡು ಹೋದ ದುಡ್ಡನ್ನು ಏನು ಮಾಡಿದ್ದೀರಿ? ಕಲ್ಯಾಣ ಕರ್ನಾಟಕ ಯಾಕೆ ಅಭಿವೃದ್ಧಿ ಆಗಲಿಲ್ಲ? ನಿಮ್ಮ ಹಣೆಬರಹಕ್ಕೆ ಈಗಲೂ ಮಹಿಳೆಯರು ಬಯಲು ಶೌಚಕ್ಕೆ ಹೋಗಬೇಕು! ಇಲ್ಲಿ ಬಂದು ಕಥೆ ಹೇಳುತ್ತೀರಿ ಎಂದು ಪ್ರಿಯಾಂಕ್ ಖರ್ಗೆಯನ್ನು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.
ನಾನು ನಿರುದ್ಯೋಗ ಮಂತ್ರಿ, ಹಾಗಾದರೆ ನೀವು ಏನಪ್ಪಾ? ನಿಮ್ಮ ಇಲಾಖೆಯ ಕಥೆ ಇರಲಿ, ನೀವು ಮತ್ತು ನಿಮ್ಮಪ್ಪ ವರ್ಷಾನುಗಟ್ಟಲೆ ಪ್ರತಿನಿಧಿಸಿದ ಕ್ಷೇತ್ರಗಳ ದುಸ್ಥಿತಿ ಹೇಗಿದೆಯಪ್ಪಾ? ಎಂದು ಕೇಂದ್ರ ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಸಿನಿಮಾ ಸೆಟ್ ಹಾಕಿ ಶೂಟಿಂಗ್ ಮಾಡಿರಬಹುದು!
ದೆಹಲಿಯ ನಿಮ್ಮ ಅಧಿಕೃತ ನಿವಾಸದಲ್ಲಿ ಸಿಸಿಬಿ ಪೊಲೀಸರು ಸರ್ಚ್ ಮಾಡಿದ್ದಾರೆ ಎಂಬ ವರದಿ ಬಂದಿದೆಯಲ್ಲವೇ? ಎಂದು ಕೇಳಲಾದ ಪ್ರಶ್ನೆಗೆ, ಬಹುಶಃ ಯಾವುದೊ ಫಿಲಂ ಶೂಟಿಂಗ್ ಆಗಿರಬಹುದು. ನನಗಂತೂ ಯಾವ ಮಾಹಿತಿ ಇಲ್ಲ ಎಂದರು.
ಹೆಲಿಕಾಪ್ಟರ್ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ನೆರವು:
ಉತ್ತರಾಖಂಡದ ಜೋಶಿಮಠದ ಸಮೀಪ ಶುಕ್ರವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ರಾಜ್ಯಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಆ ರಾಜ್ಯದ ಅಧಿಕಾರಿಗಳ ಜತೆ ನಾನೇ ಮಾತನಾಡಿದ್ದೇನೆ. ಅಲ್ಲದೆ, ನನ್ನ ಸಚಿವಾಲಯದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿ.ಇದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಇದೊಂದು ದುರಂತದ ಘಟನೆ. ಚಾರಧಾಮ್ ಯಾತ್ರೆಗೆ ಹೋಗಿದ್ದ ರಾಜ್ಯದ ಐವರು, ಓರ್ವ ಪೈಲಟ್ ಹೀಗೆ ಸಾವನ್ನಪ್ಪಿರುವುದು ಬಹಳ ನೀವು ತಂದಿದೆ. ನಿನ್ನೆಯ ದಿನ ನಾನು ಪುಣೆಯಲ್ಲಿದ್ದಾಗ ಘಟನೆಯ ಮಾಹಿತಿ ಸಿಕ್ಕಿತು. ಕೂಡಲೇ ಸಂಬಂಧಿತ ಅಧಿಕಾರಿಗಳು, ಮೃತರ ಕುಟುಂಬ ಸದಸ್ಯರ ಜತೆ ಮಾತನಾಡಿದೆ. ಅವರಿಗೆ ಬೇಕಾದ ಅನುಕೂಲ ಮಾಡಿದ್ದೇವೆ ಎಂದು ಸಚಿವರು ಹೇಳಿದರು.