Shubhashaya News

ಸೌಜನ್ಯ ಕೊಲೆ ಪ್ರಕರಣ: SIT ಮುಖ್ಯಸ್ಥ ಸ್ಥಾನದಿಂದ ಶಶಿಕುಮಾ‌ರ್ ಬಿಡುಗಡೆ : ಇಂದು ಸಂಜೆ ನೂತನ ಮುಖ್ಯಸ್ಥರ ನೇಮಕ!

ಬೆಂಗಳೂರು:ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಕರಣದ ಮರುತನಿಖೆ ನಡೆಸಲು ರಚಿಸಲಾಗಿದ್ದ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಐಜಿಪಿ ಶಶಿಕುಮಾ‌ರ್ ಅವರನ್ನು ಆ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ.

ಶಶಿಕುಮಾರ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ, ತನಿಖಾ ತಂಡದ ನೇತೃತ್ವ ವಹಿಸಲು ಸಾಧ್ಯವಿಲ್ಲವೆಂದು ಸಂಬಂಧಪಟ್ಟ ಉನ್ನತಾಧಿಕಾರಿಗಳು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG-IGP) ಲಿಖಿತ ಪತ್ರದ ಮೂಲಕ ವಿನಂತಿಸಿಕೊಂಡಿದ್ದರು. ಸೌಜನ್ಯ ಕುಟುಂಬಸ್ಥರು ಹಾಗೂ ಹೋರಾಟಗಾರರಿಂದ ವ್ಯಕ್ತವಾಗಿದ್ದ ಕೆಲ ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡು, ತನಿಖೆಯ ಪಾರದರ್ಶಕತೆ ಕಾಯ್ದುಕೊಳ್ಳಲು ಅವರು ಸ್ವಯಂಪ್ರೇರಿತರಾಗಿ ಈ ನಿರ್ಧಾರಕ್ಕೆ ಬಂದಿದ್ದು, ಅವರ ಮನವಿಯನ್ನು ಪರಿಗಣಿಸಿ ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಪ್ರಕರಣದ ತನಿಖೆ ವಿಳಂಬವಾಗದಂತೆ ಮುನ್ನಡೆಸಲು ಹೊಸ ಎಸ್‌ಐಟಿ ಮುಖ್ಯಸ್ಥರ ನೇಮಕಕ್ಕೆ ಪ್ರಕ್ರಿಯೆ ಚುರುಕುಗೊಂಡಿದೆ. ಇಂದು ಸಂಜೆಯ ವೇಳೆಗೆ ದಕ್ಷ ಅಧಿಕಾರಿಯೊಬ್ಬರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸುವ ನಿರೀಕ್ಷೆಯಿದೆ.

 

 

Leave A Reply

Your email address will not be published.