ಕಲಬುರಗಿ: 2026-27ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಸುಧಾರಿಸುವ ಉದ್ದೇಶದಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಜಿಲ್ಲೆಯ ವಿವಿಧ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಷಯವಾರು ಅತಿಥಿ ಶಿಕ್ಷಕರಿಗಾಗಿ ಆಯೋಜಿಸಿರುವ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್ ಸಂಕನೂರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಅತಿಥಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅತಿಥಿ ಶಿಕ್ಷಕರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದರು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ವಿಶೇಷ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ಇರುವ ಭಯವನ್ನು ನಿವಾರಿಸಿ, ಆಸಕ್ತಿ ಹಾಗೂ ಕುತೂಹಲ ಮೂಡಿಸುವ ರೀತಿಯಲ್ಲಿ ಬೋಧನೆ ಮಾಡಬೇಕು. ಪರಿಣಾಮಕಾರಿ ಬೋಧನಾ ವಿಧಾನಗಳ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೇರೇಪಿಸಬೇಕು. ಈ ವರ್ಷದ ಕಲಬುರಗಿ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ರಾಜ್ಯಕ್ಕೆ ಮಾದರಿಯಾಗುವಂತೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಅಜೀಂ ಪ್ರೇಮ್ಜಿ ಫೌಂಡೇಶನ್ (ಎಪಿಎಫ್) ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಾಗಾರವು ಡಯಟ್ ಪ್ರಾಚಾರ್ಯ ಶ್ರೀಶೈಲ್ ಬಿರಾದಾರ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ. ಉಪನ್ಯಾಸಕರಾದ ಆರ್.ಪಿ. ಕುಲಕರ್ಣಿ, ಚಂದ್ರಕಾಂತ್ ಕೊಣ್ಣೂರು, ಬೀನಾಜೀ ಸೂರ್ಯವಂಶಿ, ಗಿರೀಶ ಕಡ್ಲೆವಾಡ, ಸಂತೋಷ್ ಕುಲಕರ್ಣಿ, ಸೋಮಶೇಖರ ಮಠ, ಪ್ರಶಾಂತ್ ಹಾಗೂ ವಿಷ್ಣು ತೀರ್ಥ ಅವರು ಅತಿಥಿ ಶಿಕ್ಷಕರಿಗೆ ವಿಷಯಾಧಾರಿತ ತರಬೇತಿ ನೀಡಿದರು.