ಮಾನ್ವಿ: ಅನೇಕ ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರದ್ಧೆ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಪತ್ರಕರ್ತ ರಾಜಶೇಖರ ಹೆಚ್. ಅವರಿಗೆ ಕೊನೆಗೂ ಸೂಕ್ತ ಗೌರವ ಲಭಿಸಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆಯ ಶುಭ ಸಂದರ್ಭದಲ್ಲಿ, ದಿ.ಮಹಾದೇವಮ್ಮ ಬಸವರಾಜ ಸ್ವಾಮಿ ಸ್ಮರಣಾರ್ಥ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿಯಾಗಿರುವ ರಾಜಶೇಖರ ಅವರು ತಮ್ಮ ನಿಸ್ವಾರ್ಥ ವರದಿಗಾರಿಕೆಯ ಮೂಲಕ ತಾಲೂಕು ಮತ್ತು ಜಿಲ್ಲೆಯಾದ್ಯಂತ ಚಿರಪರಿಚಿತರಾಗಿದ್ದಾರೆ. ಸಮಾಜದ ಜ್ವಲಂತ ಸಮಸ್ಯೆಗಳು, ಆಡಳಿತ ಯಂತ್ರದ ಲೋಪದೋಷಗಳು ಹಾಗೂ ಸಾರ್ವಜನಿಕರ ಧ್ವನಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಹಲವಾರು ಬಾರಿ ಅಧಿಕಾರಿ ವರ್ಗವನ್ನು ಎಚ್ಚರಿಸುವ ಮಹತ್ವದ ಕೆಲಸವನ್ನು ಇವರು ಮಾಡಿದ್ದಾರೆ.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾನ್ವಿಯ ಕೋನಾಪುರ ಪೇಟೆ ಸರ್ಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಹಾಗೂ ಪಿಯುಸಿ ಶಿಕ್ಷಣವನ್ನು ಕಲ್ಮಠ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಪತ್ರಿಕೋದ್ಯಮದ ಕಡೆಗೆ ಹೆಚ್ಚಿನ ಒಲವು ಹೊಂದಿದ್ದ ಇವರು ರಾಯಚೂರಿನ ಸ್ಪಿಲ್ ಕಾಲೇಜಿನಲ್ಲಿ ಬಿ.ಎ. ಪತ್ರಿಕೋದ್ಯಮ ಪದವಿ ಪಡೆದು, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯನ್ನು ಯಶಸ್ವಿಯಾಗಿ ಮುಗಿಸಿದರು. ಶಾರದಾ ಶಿಕ್ಷಣ ಸಂಸ್ಥೆಯಲ್ಲಿ ಬಿ.ಎಡ್ ಪೂರ್ಣಗೊಳಿಸಿದ್ದಾರೆ.
ಇವರ ಪತ್ರಿಕೋದ್ಯಮದ ಪಯಣವು 2013 ರಲ್ಲಿ ‘ಸ್ಟಾರ್ ಆಫ್ ರಾಯಚೂರು’ ದಿನಪತ್ರಿಕೆಯ ಮೂಲಕ ಪ್ರಾರಂಭವಾಯಿತು. ತದನಂತರ ‘ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ಮಾನ್ವಿ ತಾಲೂಕು ವರದಿಗಾರರಾಗಿ ನಾಲ್ಕು ವರ್ಷಗಳ ಕಾಲ ಅರ್ಥಪೂರ್ಣ ಸೇವೆ ಸಲ್ಲಿಸಿದರು. ಮುಂದುವರಿದು ‘ರಾಯಚೂರು ಧ್ವನಿ’ ದಿನಪತ್ರಿಕೆಗಳಲ್ಲಿ ಪ್ರಧಾನ ಸಂಪಾದಕರಾಗಿ ಜವಾಬ್ದಾರಿ ನಿಭಾಯಿಸಿದ ಇವರು,’ರಾಯಚೂರು ಸಂಜೆ’, ‘ಕಂಪಿಲ ವಾಣಿ’ ‘ಉದಯಕಾಲ’, ‘ತುಂಗಬಿಂಬ’ ಮತ್ತು ‘ನಮ್ಮ ನೆಲ’ ಪತ್ರಿಕೆಗಳಲ್ಲಿಯೂ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ‘ಜಂಬೂ ದ್ವೀಪ’ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಒಟ್ಟು 13 ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ನಿರತರಾಗಿದ್ದಾರೆ.
ರಾಜಕೀಯ, ಶಿಕ್ಷಣ, ಸಾಮಾಜಿಕ ಸಮಸ್ಯೆಗಳು ಹಾಗೂ ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಇವರು ಪ್ರಕಟಿಸಿದ ನೈಜ ಹಾಗೂ ವಿಶೇಷ ವರದಿಗಳು ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ಗಳಿಸಿವೆ. ದೀರ್ಘಾವಧಿಯ ಶ್ರಮ ಮತ್ತು ಕಠಿಣ ಪರಿಶ್ರಮಕ್ಕೆ ಸಿಕ್ಕ ಈ ಪ್ರಶಸ್ತಿಯು ಇವರ ಮುಂದಿನ ಪತ್ರಿಕೋದ್ಯಮ ಪಯಣಕ್ಕೆ ಮತ್ತಷ್ಟು ಸ್ಪೂರ್ತಿ ನೀಡಲಿ ಎಂದು ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರು ಹಾರೈಸಿದ್ದಾರೆ.