Shubhashaya News

ಸಿಯುಕೆ ಕುಲಪತಿ ಅಧಿಕಾರಾವಧಿ ವಿಸ್ತರಣೆ

ವಿಶ್ವವಿದ್ಯಾಲಯದ ಅಭಿವೃದ್ಧಿಗೆ ನೀಡಿದ ಕೊಡುಗೆಗೆ ಮನ್ನಣೆ: ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್

ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ಅಥವಾ ಹೊಸ ಕುಲಪತಿಯ ನೇಮಕವಾಗುವವರೆಗೆ ವಿಸ್ತರಿಸಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿದೆ ಎಂದು ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, “ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರಿಗೆ ಒಂದು ವರ್ಷದ ಅಧಿಕಾರಾವಧಿ ವಿಸ್ತರಣೆ ದೊರೆತಿರುವುದನ್ನು ತಿಳಿಸಲು ಸಂತೋಷವಾಗುತ್ತಿದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಈ ಸಂಬAಧ ಆದೇಶದ ಪ್ರತಿಯನ್ನು ಕಳುಹಿಸಿದ್ದು, ಅದರಲ್ಲಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಅಧಿಕಾರಾವಧಿಯನ್ನು ಒಂದು ವರ್ಷ ಅಥವಾ ಮುಂದಿನ ಕುಲಪತಿಯ ನೇಮಕವಾಗುವವರೆಗೆ ವಿಸ್ತರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪ್ರೊ. ಬಟ್ಟು ಸತ್ಯನಾರಾಯಣ ಅವರು ಇದೇ ಜುಲೈ ೨೫ರಂದು ಕುಲಪತಿಯಾಗಿ ಐದು ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಲಿದ್ದು, ಈ ಅವಧಿಯಲ್ಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಅವರು ಪ್ರಶಂಸಿಸಿದರು.
ಅವರ ನೇತೃತ್ವದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ನೇಮಕಾತಿ, ಹೊಸ ವಿಭಾಗಗಳ ಸ್ಥಾಪನೆ, ಹೊಸ ಶೈಕ್ಷಣಿಕ ಕೋರ್ಸ್ಗಳ ಆರಂಭ, ನೂತನ ಶೈಕ್ಷಣಿಕ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಆಧುನಿಕ ಪ್ರಯೋಗಾಲಯಗಳ ಸ್ಥಾಪನೆ, ಸುಸ್ಥಿರ ಕ್ಯಾಂಪಸ್ ಅಭಿವೃದ್ಧಿ ಯೋಜನೆಗಳು, ತರಬೇತಿ ಮತ್ತು ಉದ್ಯೋಗ ಕೇಂದ್ರಗಳ ಆರಂಭ ಸೇರಿದಂತೆ ಹಲವು ಮಹತ್ವದ ಉಪಕ್ರಮಗಳು ಯಶಸ್ವಿಯಾಗಿ ಜಾರಿಗೊಂಡಿವೆ. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲಕರ ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ವಿಶೇಷ ಗಮನ ಹರಿಸಲಾಗಿದೆ ಎಂದು ಹೇಳಿದರು.
“ಪ್ರೊ. ಬಟ್ಟು ಸತ್ಯನಾರಾಯಣ ಅವರ ಅಧಿಕಾರಾವಧಿ ವಿಸ್ತರಣೆಯು ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಅವರು ನೀಡಿರುವ ಅಮೂಲ್ಯ ಕೊಡುಗೆಗೆ ಭಾರತ ಸರ್ಕಾರ ನೀಡಿರುವ ಮಾನ್ಯತೆಯಾಗಿದೆ. ಈ ವಿಸ್ತರಣೆಯಿಂದ ಈಗಾಗಲೇ ಆರಂಭಗೊAಡಿರುವ ಅಭಿವೃದ್ಧಿ ಯೋಜನೆಗಳು ಇನ್ನಷ್ಟು ವೇಗವಾಗಿ ಮುಂದುವರಿಯಲಿದ್ದು, ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತ ಸಾಧನೆ ಮಾಡಲಿದೆ ಎಂಬ ವಿಶ್ವಾಸವಿದೆ” ಎಂದು ಪ್ರೊ. ಆರ್.ಆರ್. ಬಿರಾದಾರ್ ತಿಳಿಸಿದ್ದಾರೆ.

Leave A Reply

Your email address will not be published.