ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳ ವೈಫಲ್ಯಕ್ಕೆ ಸಮಗ್ರ ತನಿಖೆ ನಡೆಸಿ: ಸಿಎಂಗೆ ಭೀಮಶೆಟ್ಟಿ ಮುಕ್ಕಾ ನಿಯೋಗದ ಮನವಿ
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಆಳಂದ: ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ನೇತೃತ್ವದ ನೀರಾವರಿ ಯೋಜನೆಗಳ ವೈಫಲ್ಯ ಅಧ್ಯ್ಯಯನ ವರದಿಯನ್ನು ರೈತರ ನಿಯೋಗವು ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ.
ಆಳಂದ: ಕಲಬುರಗಿ, ಬೀದರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿನ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ (ಕೆಎನ್ಎನ್ಎಲ್) ವ್ಯಾಪ್ತಿಯ ಹಲವು ನೀರಾವರಿ ಯೋಜನೆಗಳು ದಶಕಗಳಿಂದ ಅಪೂರ್ಣವಾಗಿದ್ದು, ಸಾವಿರಾರು ರೈತರು ನೀರಿನ ಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ನೇತೃತ್ವದಲ್ಲಿ ಕೈಗೊಂಡ Àಯಾತ್ರೆ ಅಧ್ಯಯನ ವರದಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಅವರಿಗೆ ಸಲ್ಲಿಸಿ ಒತ್ತಾಯಿಸಿದೆ.
ಕಲಬುರಗಿ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಭೀಮಾ ಮಿಷನ್ ನಿಯೋಗವು. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಮರ್ಜಾ ಯೋಜನೆ, ಭೀಮಾ ಲಿಫ್ಟ್ ಇರಿಗೇಷನ್, ಬೆಣ್ಣೆತೊರ ಯೋಜನೆ, ಚಂದ್ರಪಳ್ಳಿ ಯೋಜನೆ, ಮುಲ್ಲಾಮಾರಿ ಕೆಳದಂಡೆ ಯೋಜನೆ ಸೇರಿದಂತೆ ಆರು ಯೋಜನೆಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದೆ.
ಬೀದರ ಜಿಲ್ಲೆಯ ಚುಲ್ಕಿ ನಾಲಾ, ಕಾರಂಜಾ ಯೋಜನೆ, ಮುಲ್ಲಾಮಾರಿ ಮೇಲ್ದಂಡೆ ಯೋಜನೆ ಹಾಗೂ ಯಾದಗಿರಿ ಜಿಲ್ಲೆಯ ಸೌದಾಗರ ಮತ್ತು ಹತ್ತಿಕುಣಿ ಯೋಜನೆಗಳು ಸಹ ವರ್ಷಗಳಿಂದ ಅಪೂರ್ಣವಾಗಿಯೇ ಉಳಿದಿವೆ ಎಂದು ತಿಳಿಸಿದೆ.
‘ಕೋಟ್ಯಾಂತರ ವೆಚ್ಚ, ಆದರೆ ರೈತರಿಗೆ ನೀರಿಲ್ಲ’
ವರದಿಯಲ್ಲಿ ಅಮರ್ಜಾ ನದಿಗೆ ಬೋರಿ ನದಿಯಿಂದ, ಭೀಮಾ ನದಿಗೆ ಮಲ್ಲಾಬಾದ್ ನದಿಯಿಂದ, ಬೆಣ್ಣೆತೊರ ನದಿಗೆ ಕಾಗಿಣಾ ನದಿಯಿಂದ, ಚುಲ್ಕಿ ನಾಲಾಗೆ ಮಂಜ್ರಾ ನದಿಯಿಂದ ನೀರು ಪೂರೈಸುವ ಯೋಜನೆಗಳೂ ಸಹ ಪೂರ್ಣಗೊಳ್ಳದೆ ನಿಂತಿದ್ದು, ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಹಣ ವ್ಯರ್ಥವಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಏತ ನೀರಾವರಿ ಯೋಜನೆಗಳು, ಆಣೆಕಟ್ಟುಗಳು ಮತ್ತು ಕಾಲುವೆಗಳಲ್ಲಿ ನೀರಿಲ್ಲದೆ ರೈತರು ಕಣ್ಣೆದುರೇ ಬೆಳೆ ಒಣಗುವುದನ್ನು ನೋಡಿ ಕಂಗಾಲಾಗಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ದೊಡ್ಡ ಹೊಡೆತ ಬಿದ್ದಿದೆ ಎಂದು ನಿಯೋಗ ತಿಳಿಸಿದೆ.
‘ಐದು ದಶಕಗಳಿಂದ ರೈತರಿಗೆ ನ್ಯಾಯ ಸಿಕ್ಕಿಲ್ಲ’
೧೯೭೨-೭೩ರಿಂದ ಆರಂಭವಾದ ೧೧ ಜಲಾಶಯ ಯೋಜನೆಗಳಿಂದ ಇಂದಿನವರೆಗೆ ಕನಿಷ್ಠ ೫೦೦ ಎಕರೆ ಭೂಮಿಯೂ ನೀರಾವರಿಗೆ ಒಳಪಡದಿರುವುದು ಅತ್ಯಂತ ವಿಷಾದನೀಯ ಎಂದು ಭೀಮಶೆಟ್ಟಿ ಮುಕ್ಕಾ ಹೇಳಿದ್ದಾರೆ.
“ಈ ಭಾಗದ ಜನರು ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಅವರನ್ನು ಇಂದಿಗೂ ಸ್ಮರಿಸುತ್ತಾರೆ. ಆದರೆ ಈಗಿನ ಯೋಜನೆಗಳು ಅರ್ಧಕ್ಕೆ ನಿಂತು ವರ್ಷಾನು ವರ್ಷ ಕುಂಟುತ್ತಾ ಸಾಗುತ್ತಿವೆ. ಇದಕ್ಕೆ ಕಾರಣವಾದ ಅಧಿಕಾರಿಗಳು ಮತ್ತು ಆಡಳಿತ ಯಂತ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.
ಸಿಎಂಗೆ ನೀಡಿದ ಪ್ರಮುಖ ಬೇಡಿಕೆಗಳು:
ಕೆಎನ್ಎನ್ಎಲ್ ವ್ಯಾಪ್ತಿಯ ಎಲ್ಲಾ ಯೋಜನೆಗಳ ಸಮಗ್ರ ತನಿಖೆ ನಡೆಸಬೇಕು. ಹಣದ ದುರುಪಯೋಗ ಹಾಗೂ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಪೂರ್ಣ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ೧೧ ಜಲಾಶಯಗಳ ಡಿಸ್ಟ್ರಿಬ್ಯೂಟರ್ ಕಾಲುವೆಗಳನ್ನು ನವೀಕರಿಸಿ ರೈತರ ಹೊಲಗಳಿಗೆ ನೀರು ಹರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಯುಕ್ತವಾಗಿ ಯೋಜನೆಗಳಿಗೆ ವಿಶೇಷ ಅನುದಾನ ನೀಡಬೇಕು. ರೈತರ ಪರ ಹೋರಾಟ ಮುಂದುವರಿಯಲಿದೆ ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಮಾತನಾಡಿ, “ಇದು ಕೇವಲ ಯೋಜನೆಗಳ ಪ್ರಶ್ನೆಯಲ್ಲ; ರೈತರ ಬದುಕಿನ ಪ್ರಶ್ನೆ. ನೀರಾವರಿ ಯೋಜನೆಗಳು ಯಶಸ್ವಿಯಾದರೆ ಮಾತ್ರ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಸಾಧ್ಯ. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ರೈತರ ಪರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಸಂಪನ್ಮೂವಿದ್ದಾಗ ಏನು ಮಾಡಿಲ್ಲ. ಈಗ ಸಿಎಂ ಆಗಿದ್ದೀರಿ ಈಗಲಾದರೂ ನೀರಾವರಿ ಎಲ್ಲಾ ಐದು ಉಪ ಕಾಲುವೆಗಳಿಗೆ ಇದೇ ವರ್ಷದಿಂದಲೇ ನೀರು ಹರಿಸಬೇಕು ಎಂದು ಸಿಎಂ ಅವರಿಗೆ ಕೇಳಿಕೊಂಡ ಭೀಮಶೆಟ್ಟಿ ಅವರನ್ನು ಉದ್ದೇಶಿಸಿ ಸಿಎಂ ಅವರು ಮಾಡೋಣಾ ಎಂದು ಭರವಸೆ ನೀಡಿದರು.
ಸಿಎಂ ಜೊತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಗೃಹ ಸಚಿವ ಪ್ರಯಾಂಕ್ ಖರ್ಗೆ ಇದ್ದರು. ನಿಯೋಗದಲ್ಲಿ ಆರ್ಥಿಕ ತಜ್ಞ ಬಸವರಾಜ ಕಮನೂರ್ ಇತರರು ಇದ್ದರು.