Shubhashaya News

ಅಮರ್ಜಾ ಅಣೆಕಟ್ಟಿನಲ್ಲಿ ಶೇ.೫೭ ನೀರು

ಆಳಂದ–ಸಿಯುಕೆ ನೀರು ಪೂರೈಕೆಗೆ ಕೊರತೆ ಇಲ್ಲ

ಆಳಂದ: ಮಳೆ ಕೊರತೆಯಿಂದ ಕಳೆದ ೩೫ ದಿನಗಳಿಂದ ಅಮರ್ಜಾ ಅಣೆಕಟ್ಟಿಗೆ ಗಮನಾರ್ಹ ಒಳಹರಿವು ಆಗದಿದ್ದರೂ, ಅಣೆಕಟ್ಟಿನಲ್ಲಿ ಶೇ.೫೭ರಷ್ಟು ನೀರು ಸಂಗ್ರಹವಿರುವುದರಿAದ ಆಳಂದ ಪಟ್ಟಣ ಹಾಗೂ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ (ಸಿಯುಕೆ) ಕುಡಿಯುವ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆಳಂದ ಪಟ್ಟಣದ ಕುಡಿಯುವ ನೀರಿನ ಮೂಲವಾಗಿರುವ ಅಮರ್ಜಾ ಅಣೆಕಟ್ಟಿನಲ್ಲಿ ಇನ್ನೂ ಸಾಕಷ್ಟು ನೀರು ಲಭ್ಯವಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಸಂಗ್ರಹವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ನೀರಿನ ಅಭಾವದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಪೂರೈಕೆ ಸಾಮರ್ಥ್ಯ ಕೊರತೆಯಿಂದ ಜನರ ಸಂಕಷ್ಟ:
ಅಣೆಕಟ್ಟಿನಲ್ಲಿ ನೀರಿನ ಕೊರತೆ ಇಲ್ಲದಿದ್ದರೂ, ಆಳಂದ ಪಟ್ಟಣದಲ್ಲಿ ನೀರು ಸಂಗ್ರಹಿಸಿ ಸಮರ್ಪಕವಾಗಿ ಪೂರೈಕೆ ಮಾಡುವ ಸಾಮರ್ಥ್ಯದ ಟ್ಯಾಂಕ್‌ಗಳ ಕೊರತೆ ಮುಂದುವರಿದಿದೆ. ಈ ಕಾರಣದಿಂದ ವಾರಕ್ಕೊಮ್ಮೆ ನೀಡಬೇಕಾದ ನೀರು ಪೂರೈಕೆ ೧೦ ದಿನಗಳಿಗೊಮ್ಮೆ ನಡೆಯುತ್ತಿದೆ.

ಮಳೆಗಾಲದಲ್ಲಿಯೂ ಮನೆಗಳಿಗೆ ನಿರಂತರ ನೀರು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಹಕರು ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಬೇಸಿಗೆಯಲ್ಲಷ್ಟೇ ಅಲ್ಲ, ಮಳೆಗಾಲದಲ್ಲಿಯೂ ನೀರು ಪೂರೈಕೆ ಅಸ್ಥಿರವಾಗಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ಒಳಹರಿವು ಕಡಿಮೆ; ಕುಡಿಯುವ ನೀರಿಗೆ ಸಂಗ್ರಹ ಮೀಸಲು:
ಕಳೆದ ನಾಲ್ಕು ತಿಂಗಳ ಬೇಸಿಗೆಯ ನಂತರ ಚಳಿಗಾಲ ಸೇರಿ ಒಟ್ಟು ಎಂಟು ತಿಂಗಳಿನಿAದ ಅಮರ್ಜಾ ಅಣೆಕಟ್ಟಿಗೆ ಹೇಳಿಕೊಳ್ಳುವಂತ ಒಳಹರಿವು ಆಗಿಲ್ಲ. ಆದಾಗ್ಯೂ ಸಂಗ್ರಹಿತ ನೀರಿನಿಂದ ಬೇಸಿಗೆಯಲ್ಲಿ ರೈತರ ಅನುಕೂಲಕ್ಕಾಗಿ ಕೆಲವು ದಿನಗಳ ಕಾಲ ಕಾಲುವೆಗಳಿಗೆ ನೀರು ಹರಿಸಲಾಗಿತ್ತು.

ಈ ಬಾರಿ ಮಳೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಂಗ್ರಹವನ್ನು ಕಾಪಾಡುವ ಉದ್ದೇಶದಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಅಣೆಕಟ್ಟಿನಲ್ಲಿ ಉಳಿದಿರುವ ಶೇ.೫೭ರಷ್ಟು ನೀರನ್ನು ಮುಂದಿನ ದಿನಗಳ ಕುಡಿಯುವ ನೀರಿನ ಪೂರೈಕೆಗೆ ಜಿಲ್ಲಾಡಳಿತ ಮೀಸಲಿಟ್ಟಿದೆ.
ಅಮೃತ್ ೨.೦ ಯೋಜನೆಗೆ ರೂ.೮೫.೮೬ ಕೋಟಿ
ಆಳಂದ ಪಟ್ಟಣದ ದೀರ್ಘಕಾಲದ ನೀರು ಪೂರೈಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ರೂ.೮೫.೮೬ ಕೋಟಿಗಳ ವೆಚ್ಚದಲ್ಲಿ ಸಮಗ್ರ ನೀರು ಸರಬರಾಜು ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ.
ಈ ಯೋಜನೆಗೆ ೨೦೨೩ರ ಮಾರ್ಚ್ ೨೮ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ೨೦೨೪ರ ಮೇ ೨೩ರಂದು ಗುತ್ತಿಗೆ ನೀಡಲಾಗಿದೆ. ೨೦೨೪ರ ಆಗಸ್ಟ್ ೧೪ರಂದು ಕಾಮಗಾರಿ ಆರಂಭಗೊAಡಿದ್ದು, ೨೦೨೬ರ ಆಗಸ್ಟ್ ೧೪ರೊಳಗೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ. ಆದರೆ ಕಾಮಗಾರಿ ಪ್ರಗತಿ ನಿಧಾನವಾಗಿರುವುದರಿಂದ “ಆಮೆ ಹೆಜ್ಜೆಯಲ್ಲಿ ಸಾಗುತ್ತಿದೆ” ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಯೋಜನೆಯ ಪ್ರಮುಖ ಕಾಮಗಾರಿಗಳು:
ಅಮರ್ಜಾ ಅಣೆಕಟ್ಟಿನಲ್ಲಿ ಇನ್‌ಟೇಕ್ ವೆಲ್, ಜಾಕ್‌ವೆಲ್ ಹಾಗೂ ಪಂಪ್‌ಹೌಸ್ ನಿರ್ಮಾಣ. ೧೦.೫ ಕಿ.ಮೀ ಉದ್ದದ ಕಚ್ಚಾ ನೀರಿನ ಪೈಪ್‌ಲೈನ್ ಅಳವಡಿಕೆ. ೭.೫ ದಶಲಕ್ಷ ಲೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕ ಸ್ಥಾಪನೆ. ೧೦೧ ಕಿ.ಮೀ ಉದ್ದದ ನೀರು ವಿತರಣಾ ಜಾಲ ನಿರ್ಮಾಣ.೧೧,೦೦೦ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿ. ಪುರಸಭೆ ಮಾಹಿತಿಯ ಪ್ರಕಾರ, ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಪಟ್ಟಣದ ನೀರು ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಕಂಡುಬರುವ ನಿರೀಕ್ಷೆಯಿದೆ.
೨೦೫೫ರವರೆಗೆ ನೀರು ಪೂರೈಕೆ ಸಾಮರ್ಥ್ಯ:
ಅಮೃತ್ ೨.೦ ಯೋಜನೆಯನ್ನು ೨೦೪೦ ಹಾಗೂ ೨೦೫೫ನೇ ಸಾಲಿನ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಪ್ರಸ್ತುತ ದಿನಕ್ಕೆ ೫.೪ ಮಿಲಿಯನ್ ಲೀಟರ್ ನೀರು ಪೂರೈಕೆ ಸಾಮರ್ಥ್ಯವಿರುವ ವ್ಯವಸ್ಥೆಯನ್ನು ೧೧.೫ ಮಿಲಿಯನ್ ಲೀಟರ್‌ಗೆ ವಿಸ್ತರಿಸುವ ಗುರಿ ಹೊಂದಿದೆ.
ಯೋಜನೆ ಪೂರ್ಣಗೊಂಡ ಬಳಿಕ ಪ್ರತಿಯೊಬ್ಬ ನಾಗರಿಕರಿಗೆ ದಿನಂಪ್ರತಿ ತಲಾ ೧೩೫ ಲೀಟರ್ ನೀರನ್ನು ನಿರಂತರವಾಗಿ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನರ ನಿರೀಕ್ಷೆ: ಶೀಘ್ರ ಪೂರ್ಣಗೊಳ್ಳಲಿ ಯೋಜನೆ:
ಆಳಂದ ಪಟ್ಟಣದ ಜನರು ಪ್ರತಿದಿನ ನಿಯಮಿತ ನೀರು ಪೂರೈಕೆಯ ಕನಸನ್ನು ಸಾಕಾರಗೊಳಿಸಲು ಅಮೃತ್ ೨.೦ ಯೋಜನೆ ಶೀಘ್ರ ಪೂರ್ಣಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಅಣೆಕಟ್ಟಿನಲ್ಲಿ ನೀರು ಲಭ್ಯವಿದ್ದರೂ ಪೂರೈಕೆ ವ್ಯವಸ್ಥೆಯ ದೌರ್ಬಲ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಯೋಜನೆ ಪೂರ್ಣಗೊಂಡ ಬಳಿಕ ಶಾಶ್ವತ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಕುಡಿಯುವ ನೀರಿಗಾಗಿ ನೀರು ಲಭ್ಯ:
“ಅಮರ್ಜಾ ಅಣೆಕಟ್ಟಿನಲ್ಲಿ ಪ್ರಸ್ತುತ ಶೇ.೫೭ರಷ್ಟು ನೀರು ಸಂಗ್ರಹವಿದ್ದು, ಆಳಂದ ಪಟ್ಟಣ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಸೇರಿದಂತೆ ಅವಲಂಬಿತ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಸಾಕಷ್ಟು ಸಂಗ್ರಹವಿದೆ. ಕಳೆದ ೩೫ ದಿನಗಳಿಂದ ಗಮನಾರ್ಹ ಮಳೆಯಾಗದಿದ್ದರೂ ಹಾಗೂ ಅಣೆಕಟ್ಟೆಗೆ ಒಳಹರಿವು ಇಲ್ಲದಿದ್ದರೂ ಕುಡಿಯುವ ನೀರಿನ ಕೊರತೆ ಉಂಟಾಗುವ ಪರಿಸ್ಥಿತಿ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿರಿಸಲಾಗಿದೆ.” ಇನ್ನೂ ಮಳೆಗಾಲ ಸಾಕಷ್ಟು ಮಳೆಯಾಗಿ ನೀರು ಭರ್ತಿಯಾಗುವ ಆಶಯವಿದೆ.
ರಾಜಕುಮಾರ ಜಲದೆ ಎಇಇ ಅಮರ್ಜಾ ಅಣೆಕಟ್ಟೆ.
“ಆಳಂದ ಪಟ್ಟಣದಲ್ಲಿ ನೀರಿನ ಮೂಲದ ಕೊರತೆ ಇಲ್ಲ. ಆದರೆ ನೀರು ಸಂಗ್ರಹ ಹಾಗೂ ವಿತರಣಾ ವ್ಯವಸ್ಥೆಯ ಸಾಮರ್ಥ್ಯ ಸೀಮಿತವಾಗಿರುವುದರಿಂದ ಪ್ರತಿದಿನ ಅಥವಾ ಅಗತ್ಯವಿದ್ದಾಗ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಅಮೃತ್ ೨.೦ ಯೋಜನೆಯಡಿ ಸಮಗ್ರ ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ಮನೆಮನೆಗೆ ಸಮರ್ಪಕ ಒತ್ತಡದೊಂದಿಗೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.”
ಸಂಗಮೇಶ ಪನಶೆಟ್ಟಿ ಪುರಸಭೆ ಮುಖ್ಯಾಧಿಕಾರಿಗಳು ಆಳಂದ.

Leave A Reply

Your email address will not be published.