ಆಳಂದ ಪಟ್ಟಣದ ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚಾರಣೆ ಹಾಗೂ ಹೊಣೆಗಾರಿಕೆ ಸ್ವೀಕಾರ ಸಮಾರಂಭ ಜರುಗಿತು.
ಯೋಗ ಮಾಡುವುದು ಪ್ರತಿನಿತ್ಯದ ಭಾಗವಾಗಲಿ ಅದರ ಜೊತೆಗೆ ಹೊಣೆಗಾರಿಕೆ ಎನ್ನುವುದು ಅತ್ಯಂತ ಮಹತ್ವದ ಜವಾಬ್ದಾರಿಯಾಗಿದ್ದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ನಾಯಕರಾಗಿ ಹೊರಹೊಮ್ಮಬೇಕು ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶನಿವಾರ ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಹಾಗೂ ಹೊಣೆಗಾರಿಕೆ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ಮಕ್ಕಳಿಗೆ ಕೇವಲ ಪುಸ್ತಕ ಓದು ನೀಡುವುದಷ್ಟೇ ನಮ್ಮ ಕರ್ತವ್ಯವಾಗಬಾರದು. ಅವರಿಗೆ ಹೊಣೆಗಾರಿಕೆ ನಿಭಾಯಿಸುವ ಮತ್ತು ನಾಯಕತ್ವದ ಗುಣ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಪ್ರಾಮಾಣಿಕತೆ, ಅಧಿಕಾರ ನೀಡುವ ಸಾಮರ್ಥ್ಯ, ಸಂವಹನ, ದೃಢ ವಿಶ್ವಾಸ, ನಂಬಿಕೆ ಧೈರ್ಯ ಮತ್ತು ತಾಳ್ಮೆ, ಔದಾರ್ಯತೆ ನಿರ್ವಹಣಾ ಕಲೆ, ಸಕಾರಾತ್ಮಕ ಭಾವನೆ ಉತ್ತಮ ನಾಯಕತ್ವದ ಗುಣಗಳಾಗಿವೆ ಅವುಗಳನ್ನು ಬೆಳಸಿಕೊಳ್ಳಲು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.
ಮಕ್ಕಳಿಗೆ ಯಾರೂ ಮಾರ್ಗದರ್ಶಿಯರು ಎನ್ನುವುದು ಈಗ ತುಂಬಾ ಮುಖ್ಯವಾಗಿದೆ. ಬಹುತೇಕ ಸಿನೆಮಾ ಹೀರೋಗಳು, ಸ್ಪೋರ್ಟ್ ಸೇರಿದಂತೆ ಇತರೆ ವಲಯದಲ್ಲಿನ ಸಾಧಕರು ಹೀರೋಗಳಾಗುತ್ತಿದ್ದಾರೆ. ಅವರನ್ನು ದೊಡ್ಡ ಮಟ್ಟದಲ್ಲಿ ಫಾಲೋ ಮಾಡಲಾಗುತ್ತಿದೆ. ಆದರೆ, ವಾಸ್ತವದಲ್ಲಿ ನಮ್ಮ ಜೀವನ ಸದೃಢವಾಗಿರಲಿ, ಶಿಕ್ಷಣವಂತರಾಗಲಿ, ದೊಡ್ಡ ನೌಕರಿಗಳನ್ನು ಸಂಪಾದಿಸಿ ಸುಖವಾಗಿರಲಿ ಎಂದು ಅನುದಿನ ಹಾರೈಸುವ ಅಪ್ಪ ಅಮ್ಮ ನಮಗೆ ನಿಜವಾದ ಹೀರೋ, ಅವರನ್ನೇ ನಾವು ಫಾಲೋ ಮಾಡಬೇಕಿದೆ. ಉಳಿದೆಲ್ಲರೂ ನಮ್ಮ ಮನೋರಂಜಕರು ಎಂದರು.
ಯೋಗ ತರಬೇತುದಾರ ನಾಗರಾಜ ಸಾಲೋಳ್ಳಿ ಮಾತನಾಡಿ, ಇಂದಿನ ಮಕ್ಕಳಲ್ಲಿ ನಾಯಕತ್ವ ಗುಣ ಹುಟ್ಟಿನಿಂದಲೇ ಬರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ನಡೆದು ಹೋಗಲು ಶಿಕ್ಷಕರು ಮತ್ತು ಪಾಲಕರು ಮಾರ್ಗದರ್ಶನ ಮಾಡಬೇಕು ಎಂದರು. ನಂತರ ಯೋಗ ಮತ್ತು ಪ್ರಾಣಾಯಾಮದ ಮಹತ್ವ ಬಗ್ಗೆ ತಿಳಿ ಹೇಳಿ ಯೋಗ ಪ್ರಸ್ತುತ ಪಡಿಸಿದರು. ಯೋಗ ಪ್ರಾತ್ಯಕ್ಷಿಕೆಯಲ್ಲಿ ಶಾಲೆಯ ೧ ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ನಾಯಕರು, ಉಪನಾಯಕರು, ಕ್ರೀಡಾ ನಾಯಕರು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಬ್ಯಾಡ್ಜ್ ಹಾಗೂ ಅಧಿಕಾರದ ಪ್ರತಿಜ್ಞೆಯನ್ನು ಬೋಧಿಸಿ, ಜವಾಬ್ದಾರಿಯುತ ನಾಯಕತ್ವ ವಹಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಶಿಸ್ತು, ಸೇವಾ ಮನೋಭಾವ ಹಾಗೂ ತಂಡದ ಸಹಕಾರವನ್ನು ಬೆಳೆಸುವಲ್ಲಿ ಇನ್ವೆಸ್ಟಿಚರ್ ಡೇ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ಶಾಲೆಯ ಪ್ರಾಚಾರ್ಯೆ ಜ್ಯೋತಿ ವಿಶಾಖ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು