ಕಲಬುರಗಿ ಸೂರ್ಯದೇವನ ಖಾಸಾ ತವರೂರು ಎಂದರೂ ಅಡ್ದಿಯಿಲ್ಲ. ಬಿಸಿಲು ಇಲ್ಲಿಯವರೆಗೆ ಹಾಸೂ ಹೌದು; ಹೊಚ್ಚೂ ಹೌದು!
ಕಲ್ಯಾಣ ಕರ್ನಾಟಕದ ಭಾಗದಲ್ಲಿ, ವಿಶೇಷವಾಗಿ ಕಲಬುರಗಿಯಲ್ಲಿ ಬೇಸಿಗೆಯ ತಾಪಮಾನವು 45°C ಗಡಿ ದಾಟುವುದು ಸರ್ವೇ-ಸಾಮಾನ್ಯ. ಈ ಕಡು ಬಿಸಿಲು ಕೇವಲ ಆಯಾಸವನ್ನಲ್ಲದೆ, ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಸೂರ್ಯನ ತಾಪದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಈ ಕೆಳಗಿನ 10 ಅಂಶಗಳನ್ನು ತಪ್ಪದೇ ಪಾಲಿಸಿ.
೧. ದೇಹವನ್ನು ಸದಾ ಹೈಡ್ರೇಟ್ ಆಗಿರಿಸಿ:
ಬಾಯಾರಿಕೆಯಾಗದಿದ್ದರೂ ದಿನವಿಡೀ ನಿಯಮಿತವಾಗಿ ನೀರು ಕುಡಿಯಿರಿ. ಬಿಸಿಲಿನಲ್ಲಿ ದೇಹವು ಅತಿಯಾಗಿ ಬೆವರುವುದರಿಂದ ನೀರಿನಾಂಶ ವೇಗವಾಗಿ ಕಡಿಮೆಯಾಗುತ್ತದೆ.
೨. ನೈಸರ್ಗಿಕ ಪಾನೀಯಗಳ ಬಳಕೆ:
ಎಳೆನೀರು, ಮಜ್ಜಿಗೆ, ಬೆಲ್ಲದ ಪಾನಕ ಮತ್ತು ರಾಗಿ ಅಂಬಲಿಗೆ ಆದ್ಯತೆ ನೀಡಿ. ಅತಿಯಾದ ಕಾಫಿ, ಟೀ ಮತ್ತು ಸಕ್ಕರೆಯುಕ್ತ ತಂಪು ಪಾನೀಯಗಳು ದೇಹವನ್ನು ಮತ್ತಷ್ಟು ನಿರ್ಜಲೀಕರಣ-
ಗೊಳಿಸುತ್ತವೆ. ಆದ್ದರಿಂದ ಅವುಗಳನ್ನು ಉಪಭೋಗಿಸುವಲ್ಲಿ
ಮಿತಿ ಇರಲಿ.
೩. ಸೂಕ್ತವಾದ ಉಡುಪುಗಳ ಆಯ್ಕೆ:
ಹಗುರವಾದ, ಗಾಳಿಯಾಡುವಂತಹ ಮತ್ತು ತಿಳಿ ಬಣ್ಣದ (ಬಿಳಿ) ಹತ್ತಿ ಬಟ್ಟೆಗಳನ್ನು ಧರಿಸಿ. ಇವು ಬೆವರಿನಾಂಶವನ್ನು ಹೀರಿಕೊಳ್ಳಲು ಮತ್ತು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತವೆ.
೪. ಛತ್ರಿ ಅಥವಾ ಕೊಡೆಯ ಬಳಕೆ:
ಬಿಸಿಲಿನಲ್ಲಿ ಹೊರಗೆ ಹೋಗುವಾಗ ಕಡ್ಡಾಯವಾಗಿ ಛತ್ರಿ ಹಿಡಿಯುವುದನ್ನು ರೂಢಿಸಿಕೊಳ್ಳಿ. ಇದು ಸೂರ್ಯನ ತೀಕ್ಷ್ಣ ಕಿರಣಗಳು ನೇರವಾಗಿ ತಲೆ ಮತ್ತು ಮುಖಕ್ಕೆ ತಗುಲದಂತೆ ರಕ್ಷಿಸುವ ವೈಯಕ್ತಿಕ ನೆರಳಾಗಿ ಕಾರ್ಯನಿರ್ವಹಿಸುತ್ತದೆ.
೫. ರಕ್ಷಣಾ ಕವಚಗಳು ಮತ್ತು ‘ಲೂ’ ತಡೆ:
ಹೊರಗೆ ಹೋಗುವಾಗ ಅಗಲವಾದ ಅಂಚುಳ್ಳ ಟೋಪಿ ಅಥವಾ ಬಿಳಿ ಟವೆಲ್‌ನಿಂದ ತಲೆ ಮತ್ತು ಕಿವಿಗಳನ್ನು ಮುಚ್ಚಿಕೊಳ್ಳಿ. ಇದು ‘ಲೂ’ (ಬಿಸಿ ಗಾಳಿ) ತಗುಲದಂತೆ ತಡೆಯುತ್ತದೆ. ಕಣ್ಣುಗಳ ರಕ್ಷಣೆಗೆ ಸನ್ ಗ್ಲಾಸ್ ಬಳಸಿ.
’ಲೂ’ ಎಂದರೇನು?
’ಲೂ’ ಎನ್ನುವುದು ಬೇಸಿಗೆಯ ಕಾಲದಲ್ಲಿ, ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಬೀಸುವ ಅತಿಯಾದ ಬಿಸಿ ಹಾಗೂ ಒಣ ಗಾಳಿ. ಇದು ಉತ್ತರ ಭಾರತ ಮತ್ತು ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳಲ್ಲಿ (ಕಲಬುರಗಿ, ಬೀದರ್, ರಾಯಚೂರು) ಹೆಚ್ಚಾಗಿ ಕಂಡುಬರುತ್ತದೆ.
‘Loo’ ಎಂಬುದೊಂದು ಹವಾಮಾನದ ಪದ (Weather term).
೬. ಆಹಾರ ಕ್ರಮದಲ್ಲಿ ಬದಲಾವಣೆ:
ಬಿಸಿಲಿನಲ್ಲಿ ಜೀರ್ಣಕ್ರಿಯೆ ನಿಧಾನವಾಗಿರುತ್ತದೆ. ಆದ್ದರಿಂದ ಎಣ್ಣೆ ಪದಾರ್ಥ, ಅತಿಯಾದ ಮಸಾಲೆ ಮತ್ತು ಜಂಕ್ ಫುಡ್‌ಗಳನ್ನು ತಪ್ಪಿಸಿ. ಸೌತೆಕಾಯಿ, ಈರುಳ್ಳಿ ಮತ್ತು ಹಣ್ಣುಗಳಂತಹ ನೀರಿನಾಂಶ ಮತ್ತು
ನಾರಿನಂಶ ಹೆಚ್ಚಿರುವ ಹಗುರ ಆಹಾರ ಸೇವಿಸಿ.
೭. ಸಮಾರಂಭಗಳಲ್ಲಿ ಹೆಚ್ಚಿನ ಕಾಳಜಿ:
ಏಪ್ರಿಲ್-ಮೇ ತಿಂಗಳಲ್ಲಿ ಮದುವೆ, ಜಾತ್ರೆ ಹಾಗೂ ಹಬ್ಬಗಳು ಹೆಚ್ಚಿರುತ್ತವೆ. ಇಂತಹ ಸಂದರ್ಭದಲ್ಲಿ ಊಟೋಪಚಾರದ ಬಗ್ಗೆ ಎಚ್ಚರಿಕೆ ಇರಲಿ. ಮದುವೆ ಮನೆಗಳಲ್ಲಿ ಹಳಸಿದ ಆಹಾರ ಸೇವಿಸಬೇಡಿ ಮತ್ತು ಜನಸಂದಣಿಯಲ್ಲಿ ದೀರ್ಘಕಾಲ ಬಿಸಿಲಿಗೆ ಒಡ್ಡಿಕೊಳ್ಳಬೇಡಿ.
೮. ಹೊರಗೆ ಹೋಗುವ ಸಮಯದ ಬಗ್ಗೆ ಜಾಗೃತೆ:
ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಬಿಸಿಲು ಅತ್ಯಂತ ತೀಕ್ಷ್ಣವಾಗಿರುತ್ತದೆ. ಅನಿವಾರ್ಯತೆ ಅಥವಾ
ಅಗತ್ಯ ಇಲ್ಲದಿದ್ದರೆ ಈ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಮದುವೆ ಅಥವಾ ಇತರೆ ಕಾರ್ಯಕ್ರಮಗಳಿಗೆ ಹೋಗುವಾಗ ತಂಪಾದ ಸಮಯದಲ್ಲಿ ಪ್ರಯಾಣಿಸಿ.
೯. ಮಕ್ಕಳು ಮತ್ತು ವಯೋವೃದ್ಧರ ರಕ್ಷಣೆ:
ಮಕ್ಕಳು ಮತ್ತು ಹಿರಿಯರಿಗೆ ಶಾಖವನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಇರುತ್ತದೆ. ಮಕ್ಕಳಿಗೆ ಪದೇ ಪದೇ ನೀರು ಕುಡಿಸಿ ಮತ್ತು ಮಧ್ಯಾಹ್ನ ಹೊರಗೆ ಆಟವಾಡಲು ಬಿಡಬೇಡಿ. ಹಿರಿಯರ ರಕ್ತದೊತ್ತಡದ ಮೇಲೆ ಬಿಸಿಲು ಪರಿಣಾಮ ಬೀರದಂತೆ ಅವರು ತಂಪಾದ ಜಾಗದಲ್ಲಿ ವಿಶ್ರಾಂತಿ ಪಡೆಯುವಂತೆ ನೋಡಿಕೊಳ್ಳಿ.
೧೦. ಚರ್ಮದ ರಕ್ಷಣೆ ಮತ್ತು ವಿಶ್ರಾಂತಿ:
ಬಿಸಿಲಿಗೆ ಒಡ್ಡಿಕೊಳ್ಳುವ ಚರ್ಮಕ್ಕೆ ಉತ್ತಮ ಸನ್‌ಸ್ಕ್ರೀನ್ ಬಳಸಿ. ದಿನಕ್ಕೆ ಎರಡು ಬಾರಿ ತಣ್ಣೀರಿನ ಸ್ನಾನ ಮಾಡುವುದು ಹಿತಕರ. ಕೆಲಸದ ನಡುವೆ ಆಗಾಗ ನೆರಳಿನಲ್ಲಿ ವಿಶ್ರಾಂತಿ ಪಡೆಯಿರಿ ಮತ್ತು ಹಗಲಿನಲ್ಲಿ ಕಿಟಕಿಗಳಿಗೆ ಪರದೆ ಹಾಕಿ ಮನೆಯನ್ನು ತಂಪಾಗಿಡಿ.
ಎಚ್ಚರಿಕೆ:
ತಲೆನೋವು, ತಲೆಸುತ್ತು, ವಾಂತಿ ಅಥವಾ ಅತಿಯಾದ ಸುಸ್ತು ಕಾಣಿಸಿಕೊಂಡರೆ ತಕ್ಷಣ ನೆರಳಿನ ಜಾಗಕ್ಕೆ ಹೋಗಿ ನೀರು ಕುಡಿಯಿರಿ. ಲಕ್ಷಣಗಳು ತೀವ್ರವಾಗಿದ್ದರೆ ತಕ್ಷಣ ವೈದ್ಯರನ್ನು ಅಥವಾ ಕಲಬುರಗಿಯ ಜಿಮ್ಸ್ (GIMS),ಇ.ಎಸ್.ಐ, ಬಸವೇಶ್ವರ ಅಥವಾ ಕೆ.ಬಿ.ಎನ್ ಆಸ್ಪತ್ರೆಯನ್ನು ಸಂಪರ್ಕಿಸಿ.
ಆತ್ಮೀಯ ಬಂಧುಗಳೇ,
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಈ ಮೇಲಿನ 10 ಸರಳ ಮುನ್ನೆಚ್ಚರಿಕೆಗಳನ್ನು ಪಾಲಿಸಿ, 2026ರ ಈ ಬೇಸಿಗೆಯನ್ನು ಸುರಕ್ಷಿತವಾಗಿ ಕಳೆಯಿರಿ!
–ಎಸ್.ಎಸ್.ಹಿರೇಮಠ
ಕಾರ್ಯದರ್ಶಿ,
ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು, ಕಲಬುರಗಿ
sshirematha1953@gmail.com
Comments are closed.