Shubhashaya News

ಖಜೂರಿ ಕೋರಣೇಶ್ವರ ಜಾತ್ರೆ ಭವ್ಯ ಸಮಾರೋಪ

 

ಆಳಂದ: ಖಜೂರಿ ಶ್ರೀ ಕೋರಣೇಶ್ವರ ಜಾತ್ರೆಯಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಭಕ್ತಾದಿಗಳು ರಕ್ತದಾನ ಕೈಗೊಂಡರು.  ಕರಬಸಪ್ಪ, ಜಿಮ್ಸ್ ಆಸ್ಪತ್ರೆಯ ಡಾ. ಮಸೂಧ್, ಐಸಿಟಿಸಿ ಸಿದ್ಧಣ್ಣಾ ಇತರರು ಇದ್ದರು.

ಆಳಂದ: ಖಜೂರಿ ಕೋರಣೇಶ್ವರ ಜಾತ್ರೆಯಲ್ಲಿ ಹಮ್ಮಿಕೊಂಡ ಕರ್ನಾಟಕ ಮಹಾರಾಷ್ಟç ಜಂಗೀ ಪೈಲ್ವಾನರ ಕುಸ್ತಿ ಪಂದ್ಯಾವಳಿ ಗಮನ ಸೆಳೆಯಿತು.

ಗಡಿನಾಡಿನ ಜಂಗಿ ಕುಸ್ತಿ ಜಿದ್ದಾಜಿದ್ದಿ, ಭಕ್ತರಿಂದ ರಕ್ತದಾನಕ್ಕೆ ಉತ್ಸಾಹಭರಿತ ಸ್ಪಂದನೆ
ಆಳAದ: ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದ ಶ್ರೀ ಕೋರಣೇಶ್ವರ ಜಾತ್ರೆ ಭಕ್ತಿಭಾವ, ಕ್ರೀಡಾ ಸ್ಪರ್ಧೆಗಳು ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ಸಂಯೋಜನೆಯೊAದಿಗೆ ಭವ್ಯವಾಗಿ ಸಮಾರೋಪಗೊಂಡಿತು. ಜಾತ್ರೆಯ ಕೊನೆಯ ದಿನವಾದ ಶನಿವಾರ ನಡೆದ ವಿವಿಧ ಕಾರ್ಯಕ್ರಮಗಳು ಸಾವಿರಾರು ಭಕ್ತರನ್ನು ಸೆಳೆದವು.
ಮಧ್ಯಾಹ್ನ ನಡೆದ ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದ ಜಂಗಿ ಪೈಲ್ವಾನರ ಕುಸ್ತಿ ಸ್ಪರ್ಧೆಗಳು ಜಿದ್ದಾಜಿದ್ದಿಯಿಂದ ನಡೆಯುವ ಮೂಲಕ ಎಲ್ಲರ ಗಮನ ಸೆಳೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಪೈಲ್ವಾನರು ತಮ್ಮ ಶಕ್ತಿ, ತಂತ್ರ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿ ಕುಸ್ತಿ ಪ್ರೇಮಿಗಳನ್ನು ರಂಜಿಸಿದರು. ವಿಜೇತರಿಗೆ ೧೧೧ ರೂಪಾಯಿಯಿಂದ ೧೫ ಸಾವಿರ ರೂಪಾಯಿವರೆಗೆ ನಗದು ಬಹುಮಾನ ವಿತರಣೆ ಮಾಡಲಾಯಿತು. ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಲು ನೆರಹೊರೆಯ ಪ್ರದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಸಂಜೆ ವೇಳೆ ನಡೆದ ಲಕ್ಷ ದೀಪೋತ್ಸವ ಹಾಗೂ ಮದ್ದು ಸುಡುವ ಕಾರ್ಯಕ್ರಮ ಜಾತ್ರೆಗೆ ಭವ್ಯ ಸಮಾರೋಪ ನೀಡಿತು. ದೀಪಗಳ ಬೆಳಕಿನಲ್ಲಿ ದೇವಾಲಯ ಸುತ್ತಮುತ್ತ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಭಕ್ತಿಯಿಂದ ಶ್ರೀ ಕೋರಣೇಶ್ವರನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಜಾತ್ರೆಯ ಅಂಗವಾಗಿ ಆಯೋಜಿಸಲಾದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವು ವಿಶೇಷ ಗಮನ ಸೆಳೆಯಿತು. ಅನೇಕ ಭಕ್ತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು. ಈ ಶಿಬಿರವನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ತಂಡ ಯಶಸ್ವಿಯಾಗಿ ನಡೆಸಿತು. ವೈದ್ಯ ಡಾ. ಮಸೂಧ, ಆರೋಗ್ಯ ನಿರೀಕ್ಷಕ ಪರಮೇಶ್ವರ, ಕಲ್ಯಾಣಿ, ಐಸಿಟಿಸಿ ಸಿಬ್ಬಂದಿ ಸಿದ್ಧಣ್ಣಾ, ಜಗದೀಶ ಕಟ್ಟಿಮನಿ ಸೇರಿದಂತೆ ಸ್ಥಳೀಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಶ್ರಮಿಸಿದರು.

ಜಾತ್ರಾ ಮೈದಾನದಲ್ಲಿ ಮಕ್ಕಳ ಆಟಿಕೆಗಳು, ಜೋಕಾಲಿಗಳು ಹಾಗೂ ವಿವಿಧ ವಾಣಿಜ್ಯ ಮಳಿಗೆಗಳು ಕೂಡ ಜಾತ್ರೆಗೆ ಹಬ್ಬದ ಸಂಭ್ರಮ ಹೆಚ್ಚಿಸಿತು. ಭಕ್ತರು ಧಾರ್ಮಿಕ ಆಚರಣೆಗಳೊಂದಿಗೆ ಗಡಿನಾಡಿನ ಬಹುದೊಡ್ಡ ಜಾತ್ರೆಯು ಮನರಂಜನೆ ಹಾಗೂ ವ್ಯಾಪಾರ ಚಟುವಟಿಕೆಗಳನ್ನು ಅನುಭವಿಸಿ ಸಂತೋಷ ವ್ಯಕ್ತಪಡಿಸಿದರು. ಒಟ್ಟಾರೆ, ಖಜೂರಿ ಶ್ರೀ ಕೋರಣೇಶ್ವರ ಜಾತ್ರೆ ಧಾರ್ಮಿಕ, ಕ್ರೀಡಾ ಹಾಗೂ ಸಾಮಾಜಿಕ ಚಟುವಟಿಕೆಗಳ ಸಮನ್ವಯದಿಂದ ಯಶಸ್ವಿಯಾಗಿ ನೆರವೇರಿತು.

Comments are closed.

Don`t copy text!