ಪ್ರತಿ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದಾಗಲೂ ಕರಾವಳಿಯ ಜಿಲ್ಲೆಗಳು ಸಂಭ್ರಮದ ಮಳೆಯಲ್ಲಿ ನೆನೆಯುತ್ತಿದ್ದರೆ, ಇತ್ತ ಕಲ್ಯಾಣ ಕರ್ನಾಟಕದ ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ಫಲಿತಾಂಶದ ಪಟ್ಟಿಯ ತಳದಲ್ಲಿ ನಿಂತು ತಲೆತಗ್ಗಿಸುತ್ತವೆ. ಮಾಧ್ಯಮಗಳು ಇದನ್ನು ಕೇವಲ “ಶೈಕ್ಷಣಿಕ ಹಿನ್ನಡೆ” ಎಂದು ವ್ಯಾಖ್ಯಾನಿಸಿ, ಒಂದೆರಡು ದಿನ ಚರ್ಚೆ ನಡೆಸಿ ಕೈತೊಳೆದುಕೊಳ್ಳುತ್ತವೆ. ವಾಸ್ತವದಲ್ಲಿ, ಈ ಕೊನೆಯ ಸ್ಥಾನ ವಿದ್ಯಾರ್ಥಿಗಳ ಬೌದ್ಧಿಕ ದಿವಾಳಿತನವಲ್ಲ. ಇದು ದಶಕಗಳಿಂದ ನಮ್ಮ ನಡುವೆಯೇ ಬೇರೂರಿರುವ ವ್ಯವಸ್ಥಿತ ನಿರ್ಲಕ್ಷ್ಯದ ‘ಸಾಮಾಜಿಕ ಮರಣೋತ್ತರ ಪರೀಕ್ಷೆ’ಯ ವರದಿಯಾಗಿದೆ.
ಶಿಕ್ಷಣವೆಂಬುದು ಶೂನ್ಯದಲ್ಲಿ ಅರಳುವ ಹೂವಲ್ಲ. ಅದು ಬೆಳೆಯುವ ಮಣ್ಣು, ಸುರಿಯುವ ನೀರು ಮತ್ತು ಸಿಗುವ ಬೆಳಕನ್ನು ಅವಲಂಬಿಸಿರುತ್ತದೆ. ಯಾದಗಿರಿ, ಕಲಬುರಗಿ ಮತ್ತು ರಾಯಚೂರಿನ ತರಗತಿಗಳ ಖಾಲಿ ಬೆಂಚುಗಳನ್ನು ದಿಟ್ಟಿಸಿ ನೋಡಿದರೆ, ಅಲ್ಲಿ ದಡ್ಡತನವಿಲ್ಲ, ಬದಲಾಗಿ ಹಸಿವು, ಅಸಹಾಯಕತೆ ಮತ್ತು ಬದುಕಿನ ಹೋರಾಟ ಎದ್ದು ಕಾಣುತ್ತದೆ.
ಶೈಕ್ಷಣಿಕ ಕುಸಿತದ ಅಸಲಿ ಬೇರುಗಳು
ಯಾವುದೇ ಒಂದು ಪ್ರದೇಶದ ಶೈಕ್ಷಣಿಕ ಹಿನ್ನಡೆಯನ್ನು ಕೇವಲ ಪಠ್ಯಪುಸ್ತಕಗಳ ಗುಣಮಟ್ಟದಿಂದಾಗಲಿ ಅಥವಾ ಬೋಧನಾ ವಿಧಾನದಿಂದಾಗಲಿ ಅಳೆಯುವುದು ಮೇಲ್ನೋಟದ ತೀರ್ಮಾನವಾಗುತ್ತದೆ. ಅದರ ಅಸಲಿ ಕಾರಣಗಳನ್ನು ಅಲ್ಲಿನ ಸಾಮಾಜಿಕ ಸ್ಥಿತಿಗತಿಗಳಲ್ಲಿ ಹುಡುಕಬೇಕಾಗುತ್ತದೆ. ಕಲ್ಯಾಣ ಕರ್ನಾಟಕದ ಪಿಯುಸಿ ಫಲಿತಾಂಶದ ರಕ್ತಹೀನತೆಗೆ ಕಾರಣವಾಗಿರುವ ಪ್ರಮುಖ ಸಾಮಾಜಿಕ ರೋಗಲಕ್ಷಣಗಳು ಇಲ್ಲಿವೆ:
ಬರಗಾಲ ಮತ್ತು ಗುಳೆ: ಮಳೆಯಾಶ್ರಿತ ಕೃಷಿಯನ್ನೇ ನಂಬಿರುವ ಈ ಭಾಗದಲ್ಲಿ ಬರಗಾಲವೆಂಬುದು ಕರೆಯದೆ ಬರುವ ಅತಿಥಿ. ಜಮೀನುಗಳು ಬಿರುಕುಬಿಟ್ಟಾಗ, ಬದುಕು ಕಟ್ಟಿಕೊಳ್ಳಲು ಇಡೀ ಕುಟುಂಬ ಬೆಂಗಳೂರು, ಮುಂಬೈ, ಪುಣೆಗಳತ್ತ ‘ಗುಳೆ’ ಹೊರಡುತ್ತದೆ. ತಂದೆ-ತಾಯಿಯ ಬೆನ್ನೇರಿ ಗುಳೆ ಹೋಗುವ ಮಕ್ಕಳ ಭವಿಷ್ಯವು, ಬಸ್ಸಿನ ಟಾಪ್ ಮೇಲೆ ಕಟ್ಟಿದ ಗಂಟುಮೂಟೆಯಂತಾಗುತ್ತದೆ. ತಿಂಗಳುಗಟ್ಟಲೆ ಶಾಲೆಗೆ ಗೈರಾಗುವ, ಊರೂರು ಅಲೆಯುವ ಮಗುವಿನಿಂದ ‘ರ್‍ಯಾಂಕ್’ ನಿರೀಕ್ಷಿಸುವುದು ವ್ಯವಸ್ಥೆಯ ಕ್ರೂರ ಹಾಸ್ಯವಲ್ಲದೆ ಮತ್ತೇನು?
ಬಡತನ ಮತ್ತು ಸಾಲದ ಶೂಲ: ಆರ್ಥಿಕ ಭದ್ರತೆ ಇಲ್ಲದ ಮನೆಯಲ್ಲಿ, ಶಿಕ್ಷಣವೆಂಬುದು ಇಂದಿಗೂ ಗಗನ ಕುಸುಮವಾಗಿದೆ. ಬೆಳೆ ಹಾನಿ, ಸಾಲದ ಬಾಧೆಗಳಿಂದ ನಲುಗಿದ ಕುಟುಂಬಗಳಿಗೆ ನಾಳಿನ ಭವಿಷ್ಯದ ಕನಸಿಗಿಂತ, ಇಂದಿನ ತುತ್ತು ಅನ್ನದ ಚಿಂತೆ ದೊಡ್ಡದು. ಸಾಲದ ಸುಳಿಗೆ ಸಿಲುಕಿದ ರೈತ ನೇಣಿಗೆ ಶರಣಾದರೆ, ಆ ಮನೆಯ ಮಗನ ಕೈಯಲ್ಲಿ ಪೆನ್ನಿನ ಬದಲು ಗುದ್ದಲಿ, ಸಲಿಕೆ ಬಂದು ಸೇರುತ್ತವೆ.
ಸರಾಯಿ (ಸಾಮಾಜಿಕ ಕ್ಯಾನ್ಸರ್): ಈ ಭಾಗದ ಹಳ್ಳಿಗಳನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗು ಮದ್ಯವ್ಯಸನ. ಅಪ್ಪನ ಕುಡಿತದ ಚಟಕ್ಕೆ, ಮನೆಯ ನೆಮ್ಮದಿ ಮಾತ್ರವಲ್ಲ, ಮಕ್ಕಳ ಅಕ್ಷರಗಳೂ ಬಲಿಯಾಗುತ್ತಿವೆ. ದುಡಿದ ಹಣವೆಲ್ಲವೂ ಶಾಲೆಯ ಶುಲ್ಕದ ಬದಲು ಸಾರಾಯಿ ಅಂಗಡಿಯ ಗಲ್ಲಾಪೆಟ್ಟಿಗೆ ಸೇರುತ್ತಿದ್ದರೆ, ಮನೆಯಲ್ಲಿ ಪುಸ್ತಕ ಹಿಡಿದು ಓದುವ ವಾತಾವರಣ ನಿರ್ಮಾಣವಾಗುವುದಾದರೂ ಹೇಗೆ?
ಬಾಲಕಾರ್ಮಿಕ ಪದ್ಧತಿ ಮತ್ತು ಅನಕ್ಷರತೆ: ಪೋಷಕರಲ್ಲಿರುವ ಅನಕ್ಷರತೆಯಿಂದಾಗಿ ಶಿಕ್ಷಣದ ಮಹತ್ವ ಮುಂದಿನ ಪೀಳಿಗೆಗೆ ಸರಿಯಾಗಿ ದಾಟುತ್ತಿಲ್ಲ. “ಓದಿ ಉದ್ಧಾರ ಮಾಡಾದ ಏನದಾ? ಹೊಲದಾಗ ದುಡದ್ರ ರೊಕ್ಕಾ ಸಿಗತಾವ” ಎಂಬ ಹತಾಶೆಯ ಮಾತುಗಳು ಮಕ್ಕಳನ್ನು ಶಾಲೆ ಬಿಡಿಸಿ ಹತ್ತಿ ಹೊಲಗಳಿಗೆ, ಗ್ಯಾರೇಜುಗಳಿಗೆ, ಇಟ್ಟಿಗೆ ಭಟ್ಟಿಗಳಿಗೆ ನೂಕುತ್ತಿವೆ.
ಬಾಲ್ಯ ವಿವಾಹದ ಬೇಡಿ: ಹೆಣ್ಣುಮಕ್ಕಳ ಪಾಲಿಗೆ ಶಿಕ್ಷಣವೆಂಬುದು ಇಂದಿಗೂ ತ್ರಿಶಂಕು ಸ್ಥಿತಿ. ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆ, “ಯಾವಾಗಲೋ ಕೊಡೋ ಹೆಣ್ಣು, ಈಗಲೇ ಕೊಟ್ಟು ಜವಾಬ್ದಾರಿ ಕಳೆದುಕೊಂಡರೆ ಮುಗೀತು” ಎಂಬ ಸಾಮಾಜಿಕ ಅಭದ್ರತೆಯ ಭಾವನೆ, ಪ್ರತಿಭಾವಂತ ಹೆಣ್ಣುಮಕ್ಕಳನ್ನು ಪರೀಕ್ಷಾ ಕೊಠಡಿಯಿಂದ ನೇರವಾಗಿ ಹಸೆಮಣೆಗೆ ಎಳೆತರುತ್ತಿದೆ.
“ಇದು ಅಂಕಗಳ ಕೊರತೆಯಲ್ಲ, ಅನ್ನದ ಕೊರತೆ; ಇದು ಬುದ್ಧಿಯ ಕೊರತೆಯಲ್ಲ, ಬದುಕಿನ ಭದ್ರತೆಯ ಕೊರತೆ.”
ವ್ಯವಸ್ಥೆಯ ಕನ್ನಡಿಯೊಳಗಿನ ಗಂಟು
371(j) ಕಲಂ ಅಡಿಯಲ್ಲಿ ವಿಶೇಷ ಸ್ಥಾನಮಾನ ಸಿಕ್ಕಿದ್ದರೂ, ಅದು ಬಹುಪಾಲು ಉದ್ಯೋಗ ಮತ್ತು ನೇಮಕಾತಿಯ ಮೀಸಲಾತಿಗೆ ಸೀಮಿತವಾಗಿದೆಯೇ ಹೊರತು, ತಳಮಟ್ಟದ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿಲ್ಲ. ಶಾಲೆಗಳಿಗೆ ಬಣ್ಣ ಬಳಿದರೆ, ಸ್ಮಾರ್ಟ್ ಕ್ಲಾಸ್ ತಂದರೆ ಶಿಕ್ಷಣ ಸುಧಾರಿಸುವುದಿಲ್ಲ. ಪಾಠ ಕೇಳುವ ಮಗುವಿನ ಹೊಟ್ಟೆಯಲ್ಲಿ ಅನ್ನ, ಕಣ್ಣಿನಲ್ಲಿ ಭರವಸೆ ಇರಬೇಕು.
ಶಿಕ್ಷಕರ ಕೊರತೆ, ಮೂಲಸೌಕರ್ಯಗಳಿಲ್ಲದ ಕಾಲೇಜುಗಳು, ಮತ್ತು ಸ್ಥಳೀಯ ಆಡಳಿತದ ಇಚ್ಛಾಶಕ್ತಿಯ ಕೊರತೆ ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿವೆ. ತರಗತಿಗಳಿಗೆ ಗೈರಾಗುವ ವಿದ್ಯಾರ್ಥಿಗಳನ್ನು ಕೇವಲ ಹಾಜರಾತಿ ಪುಸ್ತಕದಲ್ಲಿ ಗೈರು ಎಂದು ಗುರುತಿಸುವ ಬದಲು, ಅವರು ಏಕೆ ಗೈರಾಗಿದ್ದಾರೆ ಎಂಬ ‘ಮೂಲ ಕಾರಣ’ವನ್ನು ಹುಡುಕುವ ಸಾಮಾಜಿಕ ಕಾಳಜಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಬೇಕಿದೆ.
ಯಾದಗಿರಿ, ಕಲಬುರಗಿ ಮತ್ತು ರಾಯಚೂರಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ವಿಫಲರಾಗಿಲ್ಲ; ನಮ್ಮ ಸರ್ಕಾರಗಳು, ನಮ್ಮ ಸಮಾಜ ಮತ್ತು ನಮ್ಮ ನೀತಿ-ನಿಯಮಗಳು ಅವರ ಪಾಲಿಗೆ ವಿಫಲವಾಗಿವೆ.
ಈ ಕಳಪೆ ಫಲಿತಾಂಶವನ್ನು ಬದಲಾಯಿಸಲು ಕೇವಲ ಪರೀಕ್ಷಾ ಸಮಯದಲ್ಲಿ ‘ವಿಶೇಷ ತರಗತಿ’ಗಳನ್ನು ತೆಗೆದುಕೊಂಡರೆ ಸಾಲದು; ವರ್ಷಪೂರ್ತಿ ‘ವಿಶೇಷ ಕಾಳಜಿ’ಯನ್ನು ತೆಗೆದುಕೊಳ್ಳಬೇಕಿದೆ.
ಗುಳೆ ಹೋಗುವ ಕುಟುಂಬಗಳ ಮಕ್ಕಳಿಗಾಗಿಯೇ ಪ್ರತಿ ಹೋಬಳಿ ಮಟ್ಟದಲ್ಲಿ ಸುಸಜ್ಜಿತ ವಸತಿ ಶಾಲೆಗಳ ನಿರ್ಮಾಣವಾಗಬೇಕು.
ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಮತ್ತು ಮದ್ಯವ್ಯಸನದ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ತಳಮಟ್ಟದ ಜಾಗೃತಿ ಮೂಡಬೇಕು.
ಕೃಷಿ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯ ಮೂಲಕ ಆರ್ಥಿಕ ಭದ್ರತೆ ಒದಗಿಸಬೇಕು.
ಕಲ್ಯಾಣ ಕರ್ನಾಟಕದ ನೆಲದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಈ ನೆಲದ ಮಕ್ಕಳಿಗೆ ಬೇಕಾಗಿರುವುದು ಅನುಕಂಪವಲ್ಲ, ಸಮಾನ ಅವಕಾಶ. ಅವರ ಕಾಲಿಗೆ ಕಟ್ಟಿರುವ ಬಡತನ, ಗುಳೆ, ಮತ್ತು ಸಾಲದ ಸರಪಳಿಗಳನ್ನು ತುಂಡರಿಸಿದರೆ, ನಾಳೆ ಅದೇ ಮಕ್ಕಳು ಫಲಿತಾಂಶದ ಪಟ್ಟಿಯಲ್ಲಿ ಶಿಖರವೇರಿ ನಿಲ್ಲಬಲ್ಲರು. ಆ ದಿನವೇ ನಿಜವಾದ ‘ಕಲ್ಯಾಣ’ ಕರ್ನಾಟಕದ ಉದಯ.
ಶಿವರಾಜ ಸೂ. ಸಣಮನಿ
Comments are closed.