Shubhashaya News

ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ ಹಾಗೂ ಸಂಸ್ಕಾರ ಬೆಳವಣಿಗೆ: ರಾಜಕುಮಾರ ಕಾಂಬಳೆ

ಆಳಂದ: ಧಂಗಾಪುರ ಇಂದಿರಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ನಿಂಬರ್ಗಾ ರಾಜಕುಮಾರ ಎಸ್ ಕಾಂಬಳೆ ನಾಟಕ ಉದ್ಘಾಟಿಸಿದರು. ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು. ಬಿಆರ್‍ಸಿ ಅಣ್ಣಪ್ಪ ಹಾದಿಮನಿ. ಇತರರು ಇದ್ದರು.

ಆಳಂದ: ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳಲ್ಲಿನ ಜ್ಞಾನವಲ್ಲ. ಅದು ವ್ಯಕ್ತಿತ್ವ ನಿರ್ಮಾಣ, ನೈತಿಕ ಮೌಲ್ಯಗಳ ಬಲವರ್ಧನೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಸಮಗ್ರ ಪ್ರಕ್ರಿಯೆಯಾಗಿದೆ ಎಂದು ನಿಂಬರ್ಗ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಕಾಂಬಳೆ ಹೇಳಿದರು. ತಾಲೂಕಿನ ಧಂಗಾಪುರ ಗ್ರಾಮದ ಇಂದಿರಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 2025–26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. “ಬಯಸದೆ ಬಂದ ಭಾಗ್ಯ ಬದುಕು ಕೆಡಿಸಿತು (ಅರ್ಥಾತ್) ತಂಗಿ ತೀರಿಸಿದ ತವರು ಮನೆ ಋಣ” ನಾಟಕಕ್ಕೆ ಚಾಲನೆ ನೀಡಿ, ಶಾಲಾ ವಾರ್ಷಿಕೋತ್ಸವವು ಕೇವಲ ಹಬ್ಬ ಹರಿದಿನವಲ್ಲ, ಅದು ವಿದ್ಯಾರ್ಥಿಗಳ ವರ್ಷದ ಪರಿಶ್ರಮ, ಶಿಸ್ತಿನ ಜೀವನ ಮತ್ತು ಸಾಧನೆಗಳ ಸಂಭ್ರಮವಾಗಿದ್ದು, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ನಿಂಬರ್ಗಾದ ಶ್ರೀ ಹುಚ್ಚೇಶ್ವರ ವಿರಕ್ತಮಠದ ಪೀಠಾಧಿಪತಿ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಮಕ್ಕಳನ್ನು ಹೆತ್ತ ಮಾತ್ರಕ್ಕೆ ತಂದೆ-ತಾಯಿಗಳ ಕರ್ತವ್ಯ ಮುಗಿಯುವುದಿಲ್ಲ. ಮಕ್ಕಳನ್ನು ಸಾಕ್ಷರರನ್ನಾಗಿ ರೂಪಿಸಿ, ಉತ್ತಮ ಸಂಸ್ಕಾರ ಹಾಗೂ ಮೌಲ್ಯಗಳನ್ನು ತುಂಬಿ, ಸಮಾಜಕ್ಕೆ ಸತ್ಪ್ರಜೆಗಳನ್ನಾಗಿ ನೀಡುವುದು ತಂದೆ-ತಾಯಿಗಳ ಜೊತೆಗೆ ಶಿಕ್ಷಕರ ಕರ್ತವ್ಯವೂ ಸಮಾನವಾಗಿ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭ ಉದ್ಘಾಟಿಸಿದ ಬಿಆರ್‍ಸಿ ಸಮನ್ವಯ ಅಧಿಕಾರಿ ಅಣ್ಣಪ್ಪ ಹಾದಿಮನಿ ಮಾತನಾಡಿ, ಈ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳ ಪಾಲಕರ ಸಹಕಾರ ಅತ್ಯಂತ ಅಗತ್ಯವೆಂದು ಹೇಳಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಮಹಾನ್ ರಾಠೋಡ, ತಾಲೂಕು ದಲಿತ ಸೇನಾ ಅಧ್ಯಕ್ಷ ಪಿಂಟು ಸಾಲೆಗಾಂವ, ಆಕಾಶ್ ಬಂಗರಗಿ, ಅಪ್ಪು ಗೋಪಾಳೆ, ವಿಶ್ವನಾಥ ವಠಾರ ಧರ್ಮವಾಡಿ, ಅಧ್ಯಕ್ಷ ನಾಗರಾಜ್ ಖಂಡೋಜಿ, ಪ್ರಭುಲಿಂಗ ಕುಂಬಾರ, ಪ್ರಭುಲಿಂಗ ಪಾಟೀಲ ಝಳಕಿ (ಕೆ), ಚಂದ್ರಶೇಖರ ಶೇಗಜಿ, ಶಶಿಧರ, ನವರಂಗ, ಶಿವಲಿಂಗ ಮಾಡಿಯಾಳ, ಶ್ರೀನಿವಾಸ ಅಷ್ಠಗಿ, ಸುಮಂಗಲ ನಾಗೋಜಿ, ಮೋನಬಾಯಿ ಪೂಜಾರಿ, ಸಂಸ್ಥೆಯ ಕಾರ್ಯದರ್ಶಿ ವಿಶಾಲಾ ತೆಲಕರ್, ಮುಖ್ಯಗುರು ಅಂಬಿಕಾ ಅಷ್ಠಗಿ, ದಶರತ ಕಾಂಬಳೆ, ಲಕ್ಷ್ಮಿ ಬಂದ್ರವಾಡ, ಸರಸ್ವತಿ ಕೋರೆ, ಮಲ್ಲಮ್ಮ ಆಳಂದ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಶಿವಲಿಂಗ ತೇಲ್ಕರ್ ಮಾತನಾಡಿ, ಸಂಸ್ಥೆಯ ನಡೆದು ಬಂದ ಹಾದಿ ಹಾಗೂ ಸಾಧನೆಗಳನ್ನು ವಿವರಿಸಿದರು. ಅಭಿμÉೀಕ್ ತೇಲ್ಕರ್ ನಿರೂಪಿಸಿದರು. ರಾಕೇಶ್ ರಾಠೋಡ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನಾಟಕ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.

Comments are closed.

Don`t copy text!