Shubhashaya News

ಆಳಂದ್ ತಾಲೂಕು 48,690 ಹೆಕ್ಟೇರ್ ಬೆಳೆಹಾನಿ  

ರೈತರು ಸಂಕಷ್ಟದಲ್ಲಿ, ಪರಿಹಾರಕ್ಕಾಗಿ ಕಾದು ನೋವು

ಆಳಂದ: ದರ್ಗಾಶಿರೂರ ಗ್ರಾಮದ ಹೊಲವೊಂದರಲ್ಲಿ ಮಳೆ ನೀರಿನ ಪ್ರವಾಹದೊಂದಿಗೆ ಬಂದ ಮಣ್ಣಿನಲ್ಲಿ ಬೆಳೆಯಲ್ಲ ಮುಚ್ಚಿಕೊಂಡ ನಷ್ಟವಾದ ದೃಶ್ಯ.

 

 

ಆಳಂದ: ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅತಿಮಳೆಯ ಪರಿಣಾಮವಾಗಿ ಬೆಳೆ ಕಳೆದುಕೊಂಡ ತಾಲೂಕಿನ ರೈತರು ಗಂಭೀರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಆಳಂದ, ಖಜೂರಿ, ನಿಂಬರಗಾ, ಮಾದನಹಿಪ್ಪರಗಾ ಮತ್ತು ನರೋಣಾ ವಲಯದ ಈ ಐದು ಹೋಬಳಿ ವ್ಯಾಪ್ತಿಯ ತೊಗರಿ, ಉದ್ದು, ಹೆಸರು, ಸೋಯಾಬೀನ್ ಸೇರಿದಂತೆ ಹಲವು ಬೆಳೆಗಳು ವ್ಯಾಪಕ ಹಾನಿಗೀಡಾಗಿದ್ದು, ಜಂಟಿ ಸಮಿತಿಯ ಪ್ರಾಥಮಿಕ ಅಂದಾಜು ಪ್ರಕಾರ 48,690 ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೀಡಾಗಿವೆ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್‍ನಲ್ಲಿ ಮಾತ್ರ ಸುಮಾರು 15,029 ಹೆಕ್ಟೇರ್ ಬೆಳೆಗಳು ಹಾನಿಗೀಡಾದರೆ, ಸೆಪ್ಟೆಂಬರ್‍ನ ಸತತ ಮಳೆಯಿಂದ ಹಾನಿಯ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಅಮರ್ಜಾ ಅಚ್ಚುಕಟ್ಟು ಪ್ರದೇಶದ ಸುಮಾರು 352 ಹೆಕ್ಟೇರ್ ಕಬ್ಬು ಬೆಳೆಗಳು ಸಹ ಹಾನಿಗೀಡಾಗಿವೆ. ಒಟ್ಟಾರೆ ಮುಂಗಾರು ಹಂಗಾಮಿನಲ್ಲಿ 1.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು, ಆದರೆ ವಾಸ್ತವ್ಯದಲ್ಲಿ ಬೆಳೆ ಮಳೆ ನೀರಿಗೆ ವಾರದಲ್ಲೇ ಬೆಳೆ ಹಾನಿಯಾದರೆ ಭೂಮಿ ಆರಿದ ಬಳಕವೂ ಬೆಳೆ ಒಣಗಲಾರಂಬಿಸಿದ್ದು, ರಾಶಿಗೆ ಬಂದ ಬೆಳೆ ಉದ್ದು, ಹೆಸರು ಮತ್ತು ಸೋಯಾ ಕೈಗೆ ಬಾರದೆ ಹೋಗಿ ಮೇಲ್ನೋಟಕ್ಕೆ ಕಂಡಿದ್ದಕ್ಕಿಂತ ರೈತರ ಹೊಲಗಳಲ್ಲಿ ವಾಸ್ತವ್ಯದಿಂದ ಬೆಳೆ ಹಾನಿಯಾಗಿದೆ ಎಂದು ರೈತ ಮುಖಂಡರು ಹೇಳಿಕೊಂಡಿದ್ದಾರೆ.

ಆದರೆ ತಾಲೂಕಿನಲ್ಲಿ ಸರ್ವೇ ಇನ್ನೂ ಮುಂದುವರಿಯುತ್ತಿದ್ದು, ಅಂಕಿಅಂಶಗಳು ಬದಲಾವಣೆಯಾಗುವ ಸಾಧ್ಯತೆ ಇದೆ. ಬೆಳೆ ಹಾನಿ ವರದಿಯಲ್ಲಿ ಅಂತರಿಕ ಜಟಾಪಟಿ ಉಂಟಾಗಿ ಮೇಲಾಧಿಕಾರಿಗಳು ಸಲ್ಲಿಸಿದ ಪ್ರಾಥಮಿಕ ವರದಿ ಪರಿಷ್ಕರಣೆಗೆ ಸೂಚನೆ ನೀಡಿದ್ದು, ಸ್ಥಳೀಯ ಸಮಿತಿಗಳು ನಿಖರ ಮಾಹಿತಿಯನ್ನು ಸಂಗ್ರಹಿಸಲು ಹರಸಾಹಸ ಪಡುತ್ತಿವೆ ಎನ್ನಲಾಗಿದೆ.

ರೈತರ ಅಳಲು ಹೆಚ್ಚುತ್ತಿದೆ:

ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರಿನ ಪ್ರವಾಹದಿಂದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಕೆಲವೆಡೆ ನೀರಿನಲ್ಲಿ ನಿಂತು ಬೆಳೆ ನಾಶವಾಗಿದ್ದು, ನೀರು ಇಳಿದ ಬಳಿಕ ಬರಡಾಗಿ ಬೆಳೆ ಒಣಗುತ್ತಿದೆ. ರೈತರು ಹಿಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕಾದ ಸಮಯದಲ್ಲೇ ಸಾಲದ ಒತ್ತಡ, ಭೂಮಿ ಬರಡಾಗಿರುವ ಸ್ಥಿತಿ, ಮತ್ತು ಪರಿಹಾರಕ್ಕಾಗಿ ನಿರೀಕ್ಷೆ ಇವರಿಗೆ ಮತ್ತೊಂದು ಕಠಿಣ ಹಾದಿಯಾಗಿದೆ.

“ತೊರೆನಿಂತ ಮೇಲೆ ಬರಡಾಗಿ ನಿಂತ ಭೂಮಿ, ಮತ್ತೇನು ಮಾಡಲಿ?” ಎಂದು ಕೈಚಲ್ಲ್ಳಿ ಕುಳಿತ ರೈತರ ದುಃಖಭರಿತ ಮಾತುಗಳು ಹಳ್ಳಿಹಳ್ಳಿಗಳಲ್ಲಿ ಕೇಳಿ ಬರುತ್ತಿವೆ. “ನಮ್ಮ ಕಡೆ ಅರ್ಧಕ್ಕಿಂತ ಹೆಚ್ಚು ಬೆಳೆ ಹೋದವು, ಏನ್ರೀ ಆರಾಮ?” ಎಂದು ಪರಸ್ಪರ ಅಳಲು ತೋಡಿಕೊಳ್ಳುವ ದೃಶ್ಯಗಳು ಸಭೆ, ಸಮಾರಂಭ, ಸಂತೆ, ಬಸ್ ನಿಲ್ದಾಣ ರಸ್ತೆಗಳು ಹೀಗೆ ಎಲ್ಲೆಡೆ ಕೇಳಿಬರತೊಡಗಿದೆ.

ವ್ಯಾಪಾರ ವಲಯಕ್ಕೂ ಪೇಟು

ಪಟ್ಟಣಗಳಲ್ಲಿನ ಹಣ್ಣಿನ, ದಿನಸಿ, ಕಿರಾಣಿ, ಬಟ್ಟೆ ಹಾಗೂ ಇತರ ವ್ಯಾಪಾರಿಗಳು ಸಹ ರೈತರ ಬೆಳೆ ಹಾನಿಯಿಂದ ವ್ಯಾಪಾರ ವೈಹಿವಾಟಿಕೆ ಹಿಂದೇಟಾಕುತ್ತಿರುವುದು ಸಹ ಇಡೀ ವ್ಯಾಪಾರ ಕುಸಿತದಿಂದ ವ್ಯಾಪಾರಿಗಳು ಸಹ ತತ್ತರಿಸುತ್ತಿದ್ದಾರೆ. “ದಿನದೋಡಿ ಅಂಗಡಿ ತೆರೆದು ಬೋಣಗಿ ಆದರೆ — ಸಾಕಪ್ಪ” ಎಂದು ವ್ಯಾಪಾರಿಗಳು ದೇವರ ದಯೆಗೆ ಮೊರೆ ಹೋಗುವಂತಾಗಿದೆ.

ಸರ್ಕಾರದ ಭರವಸೆ – ರೈತರ ಕಾದು ನೋವು:

ಸರ್ಕಾರ ಪರಿಹಾರ ನೀಡುವುದಾಗಿ ಘೋಷಿಸಿದರೂ, ಸರ್ವೇ ವಿಳಂಬದಿಂದ ಹಣ ಖಾತೆಗೆ ಯಾವಾಗ ಜಮವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಸಾವಿರಾರು ರೈತರು ಬೆಳೆ ವಿಮೆ ಕೈಗೊಂಡಿದ್ದು, ಬೆಳೆವಿಮೆಯಾದರು É ಮೊದಲು ಬರಲಿ, ಅದರ ಚಕಾವೇ ಎತ್ತುತ್ತಿಲ್ಲವಲ್ಲಾ!” ಎಂಬ ಅಸಮಾಧಾನವೂ ಕೇಳಿ ಬರುತ್ತಿದೆ.

ಆಳಂದ್ ತಾಲೂಕಿನ ರೈತರು ಈಗ ಪ್ರಕೃತಿ ವಿಪತ್ತು ಮತ್ತು ಆಡಳಿತದ ವಿಳಂಬದ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಮಳೆ ತಣ್ಣಗಾದರೂ, ಅವರ ಬದುಕಿನ ಬಿಸಿಲು ಇನ್ನೂ ಬಿಸಿಯೇ ಇದೆ. ಪರಿಹಾರದ ನಿರೀಕ್ಷೆಯಲ್ಲಿ ರೈತರು ಸರ್ಕಾರದ ಕಣ್ಣೆದುರು ನಿರಾಶೆಯಿಂದ ಕಾದು ಕುಳಿತಿದ್ದಾರೆ.

ಘೋಷಣೆ ಸಾಲದು ಖಾತೆಗೆ ನೀಡಿ: ಗುತ್ತೇದಾರ

ಅತಿಯಾದ ಮಳೆಯಿಂದಾಗಿ ರೈತರ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಸರ್ಕಾರ ಪರಿಹಾರ ಘೋಷಣೆ ಮಾಡಿದರೆ ಸಾಲದು ತಕ್ಷಣಕ್ಕೆ ಅವರ ಖಾತೆಗೆ ಪರಿಹಾರ ನೀಡಬೇಕು. ಅಲ್ಲದೆ ಬೆಳೆ ವಿಮೆ ಕೈಗೊಂಡ ರೈತರಿಗೆ ವಿಮೆ ಪರಿಹಾರವೂ ತಕ್ಷಣಕ್ಕೆ ನೀಡಿ ಹಿಂಗಾರು ಹಂಗಾಮಿನ ಬಿತ್ತನೆಗೆ ಸರ್ಕಾರ ಅನುಕೂಲ ಮಾಡಿಕೊಡಬೇಕು.

ಸುಭಾಷ ಗುತ್ತೇದಾರ ಮಾಜಿ ಶಾಸಕರು ಆಳಂದ.

ಹಾನಿ ವರದಿಗೆ ಕಾಲಾವಕಾಶ:

ತಾಲೂಕಿನ ಬೆಳೆ ಹಾನಿಯಾದ ವಿವರವಾದ ಪೂರ್ಣ ವರದಿ ಸಿದ್ಧಪಡಿಸಲಾಗುತ್ತಿದೆ. ಹಾನಿಯ ಸಮೀಕ್ಷೆ ಇನ್ನೂ ಪ್ರಗತಿ ಹಂತದಲ್ಲಿದೆ. ಅಕ್ಟೋಬರ್ 10ರೊಳಗೆ ವರದಿ ಸಲ್ಲಿಸಲು ಕಾಲಾವಕಾಶ ದೊರೆತ್ತಿದ್ದು, ಹಾನಿಯ ವರದಿಯನ್ನು 10ರಂದು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು.

ಅಣ್ಣಾರಾವ್ ಪಾಟೀಲ ತಹಸೀಲ್ದಾರರು ಆಳಂದ.

Leave A Reply

Your email address will not be published.