Shubhashaya News

ಈ ಬಾರಿಯ ಮೈಸೂರು ದಸರಾ ಆಚರಣೆಯನ್ನು ಹೊಸ ಮುಖ್ಯಮಂತ್ರಿ ಮಾಡಲಿದ್ದಾರೆ: ಆರ್.ಅಶೋಕ್ ಭವಿಷ್ಯ

ಸೆಪ್ಟೆಂಬರ್‌ನಲ್ಲಿ ಸಿಎಂ ಕುರ್ಚಿ ಬದಲಾಗಲಿದೆ. ಕ್ರಾಂತಿ ನಡೆಯಲಿದೆ ಎಂದು ಸಚಿವರೇ ಹೇಳುತ್ತಿದ್ದು, ಇಡೀ ಕಾಂಗ್ರೆಸ್‌ ಒಡೆದ ಮನೆಯಾಗಿದೆ. ಈ ಬಾರಿಯ ದಸರಾ ಆಚರಣೆಯನ್ನು ಹೊಸ ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.

ತುರ್ತು ಪರಿಸ್ಥಿತಿ ಹೇರಿಕೆಗೆ 50 ವರ್ಷ ಸಂದ ಪ್ರಯುಕ್ತ, ಮೈಸೂರಿನ ವಿಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ ಅಪಾಯಕಾರಿ, ಆದರೆ ಅಧಿಕಾರದಲ್ಲಿ ಇಲ್ಲವಾದರೆ ಇನ್ನಷ್ಟು ಅಪಾಯಕಾರಿ ಎಂದು ಅಟಲ್‌ ಬಿಹಾರಿ ವಾಜಪೇಯಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಎಂದು ಹೇಳುತ್ತಾರೆ. ಆದರೆ ಇದೇ ಕಾಂಗ್ರೆಸ್‌ನವರು ತುರ್ತು ಪರಿಸ್ಥಿತಿ ಹೇರಿದ್ದರು. ಆಗಿನಂತೆ ಈಗ ಯಾವ ಪತ್ರಿಕೆ ಮುಚ್ಚಿದ್ದಾರೆ, ನ್ಯಾಯಾಂಗದ ಮೇಲೆ ಎಲ್ಲಿ ಒತ್ತಡ ಹೇರಿದ್ದಾರೆ, ಯಾವಾಗ ಚುನಾವಣೆ ಮುಂದೂಡಿದ್ದಾರೆ ಎಂದು ತಿಳಿಸಲಿ ಎಂದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಇವರು ಮಕ್ಕಳು ಚುನಾವಣೆಯಲ್ಲಿ ನಿಲ್ಲುವುದನ್ನು ಯಾರೂ ತಡೆದಿಲ್ಲ. ವಿದೇಶಕ್ಕೆ ಹೋಗಿ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡುವುದನ್ನೂ ಯಾರೂ ತಡೆದಿಲ್ಲ. ಪತ್ರಿಕೆಯಲ್ಲಿ ಏನು ಬರೆಯಬೇಕೆಂದು ಆಗ ಪೊಲೀಸರು ತೀರ್ಮಾನ ಮಾಡುತ್ತಿದ್ದರು. ಈಗ ಅಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದರು.

ಬಿಜೆಪಿಯಿಂದ ಸಂವಿಧಾನ ಬದಲಾಗುತ್ತದೆ ಎಂದು ಟೀಕಿಸುತ್ತಾರೆ. ಆದರೆ ತುರ್ತು ಪರಿಸ್ಥಿತಿಗಾಗಿ ಕಾಂಗ್ರೆಸ್‌ನವರೇ ಸಂವಿಧಾನ ತಿದ್ದುಪಡಿ ಮಾಡಿದ್ದರು. ಡಾ.ಬಿ.ಆರ್‌.ಅಂಬೇಡ್ಕರ್‌ ಕಾಂಗ್ರೆಸ್‌ನವರ ಮನೆ ಆಸ್ತಿ ಎಂದುಕೊಂಡಿದ್ದಾರೆ. ಅಂಬೇಡ್ಕರ್‌ ಸತ್ತಾಗ ಅವರ ಸಮಾಧಿಗೆ ಜಾಗ ನೀಡಲಿಲ್ಲ. ಇಂದಿರಾಗಾಂಧಿ ಕುಟುಂಬದವರು ಸತ್ತಾಗ ಮಾತ್ರ ಸಮಾಧಿಗೆ ಜಾಗ ನೀಡಿದ್ದರು. ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಂಬೇಡ್ಕರ್‌ಗೆ ಭಾರತರತ್ನ ನೀಡಲಾಯಿತು. ಈ ಎಲ್ಲ ವಿಷಯಗಳನ್ನು ಜನರಿಗೆ ತಿಳಿಸಬೇಕು ಎಂದರು.

Comments are closed.

Don`t copy text!